ಹಲ್ದ್ವಾನಿ ಹಿಂಸಾಚಾರ: 50 ಆರೋಪಿಗಳಿಗೆ ಜಾಮೀನು ನೀಡಿದ ಉತ್ತರಾಖಂಡ ಹೈಕೋರ್ಟ್, ನಿಧಾನ ತನಿಖೆಗಾಗಿ ಪೋಲಿಸರಿಗೆ ತರಾಟೆ
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಹಲ್ದ್ವಾನಿ ನಗರದಲ್ಲಿ ಫೆ.8ರಂದು ಭುಗಿಲೆದ್ದಿದ್ದ ಹಿಂಸಾಚಾರದ ಸಂದರ್ಭದಲ್ಲಿ ಕೊಲೆಯತ್ನ, ದಂಗೆ ಮತ್ತು ಡಕಾಯಿತಿಯ 50 ಆರೋಪಿಗಳಿಗೆ ಬುಧವಾರ ಜಾಮೀನು ಮಂಜೂರು ಮಾಡಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯವು, ನಿಧಾನ ಗತಿಯ ತನಿಖೆಗಾಗಿ ರಾಜ್ಯ ಪೋಲಿಸರಿಗೆ ಛೀಮಾರಿ ಹಾಕಿದೆ.
ಫೆ.8ರಂದು ಹಲ್ದ್ವಾನಿ ಮಹಾನಗರ ಪಾಲಿಕೆಯು ಬನಭೂಲಪುರ ಪ್ರದೇಶದಲ್ಲಿಯ ಮಸೀದಿ ಮತ್ತು ಮದರಸದ ಕುರಿತು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅವುಗಳನ್ನು ನೆಲಸಮಗೊಳಿಸಿದ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಆರು ಜನರು ಕೊಲ್ಲಲ್ಪಟ್ಟಿದ್ದರು.
ಗುಂಪೊಂದು ಪೋಲಿಸ್ ಠಾಣೆ ಮತ್ತು ಸರಕಾರಿ ಹಾಗೂ ಖಾಸಗಿ ವಾಹನಗಳನ್ನು ಸುಟ್ಟು ಹಾಕಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರು ಸೇರಿದಂತೆ 90ಕ್ಕೂ ಅಧಿಕ ಜನರನ್ನು ಪೋಲಿಸರು ಬಂಧಿಸಿದ್ದರು.
ಘಟನೆ ನಡೆದು 90 ದಿನಗಳು ಕಳೆದಿದ್ದರೂ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರಲಿಲ್ಲ, ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ತಿವಾರಿ ಮತ್ತು ಪಂಕಜ್ ಪುರೋಹಿತ್ ಅವರ ವಿಭಾಗೀಯ ಪೀಠವು 50 ಆರೋಪಿಗಳಿಗೆ ‘ಡಿಫಾಲ್ಟ್ ಜಾಮೀನು’ ಮಂಜೂರು ಮಾಡಿತು.
ಅಪರಾಧ ಪ್ರಕ್ರಿಯಾ ಸಂಹಿತೆಯ ಪ್ರಕಾರ ರಿಮಾಂಡ್ ದಿನಾಂಕದ 60 ದಿನಗಳಲ್ಲಿ ಅಥವಾ ಕೆಲವು ಪ್ರಕರಣಗಳಲ್ಲಿ 90 ದಿನಗಳ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಬೇಕು. ಈ ಅವಧಿಯೊಳಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಆರೋಪಿ ಡಿಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
‘ತನಿಖೆಯು ನಡೆದಿರುವ ರೀತಿಯು ತನಿಕಾಧಿಕಾರಿಯ ನಿರ್ಲಕ್ಷ್ಯವನ್ನು ಮತ್ತು ತನಿಖೆಯ ಮಂದಗತಿಯನ್ನು ಸ್ಪಷ್ಟವಾಗಿ ತೋರಿಸಿದೆ, ಅದೂಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿ ಕೊಳೆಯುತ್ತಿರುವಾಗ’ ಎಂದು ಹೇಳಿದ ನ್ಯಾಯಾಲಯವು,ಮೂರು ತಿಂಗಳುಗಳಲ್ಲಿ ಪೊಲೀಸರು ಎಂಟು ಅಧಿಕಾರಿ ಸಾಕ್ಷಿಗಳು ಮತ್ತು ನಾಲ್ವರು ಸಾರ್ವಜನಿಕ ಸಾಕ್ಷಿಗಳ ಹೇಳಿಕೆಗಳನ್ನು ಮಾತ್ರ ದಾಖಲಿಸಿದ್ದಾರೆ ಎಂದು ಬೆಟ್ಟು ಮಾಡಿತು.
ಮೊದಲ ತಿಂಗಳಲ್ಲಿ ಕೇವಲ ಇಬ್ಬರು ಸಾರ್ವಜನಿಕ ಸಾಕ್ಷಿಗಳು ಮತ್ತು ಓರ್ವ ಅಧಿಕಾರಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಆಲಸ್ಯತನದ ತನಿಖೆಯ ಪರಾಕಾಷ್ಠೆಯನ್ನು ತೋರಿಸಿದೆ ಎಂದು ಕುಟುಕಿದ ಪೀಠವು,ಫೆ.13ರಂದು ವಶಪಡಿಸಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರಗಳನ್ನು 45 ದಿನಗಳ ‘ಅತಿಯಾದ ಮತ್ತು ವಿವರಿಸಲಾಗದ ವಿಳಂಬ’ದ ಬಳಿಕ ಎ.1ರಂದಷ್ಟೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎ.16ರಂದು ವಶಪಡಿಸಿಕೊಂಡಿದ್ದ ವಸ್ತುಗಳನ್ನು 90 ದಿನಗಳ ಬಳಿಕ ಮೇ 18ರಂದಷ್ಟೇ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.
ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಪೋಲಿಸರಿಗೆ ಹೆಚ್ಚುವರಿ ಕಾಲಾವಕಾಶವನ್ನು ನೀಡಿದ್ದ ಕೆಳನ್ಯಾಯಾಲಯದ ಆದೇಶವನ್ನೂ ಉಚ್ಚ ನ್ಯಾಯಾಲಯವು ರದ್ದುಗೊಳಿಸಿತು.