ಎರಡನೇ ಬಾರಿ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಉದ್ದೀಪನ ದ್ರವ್ಯ ಸೇವನೆ ಪತ್ತೆ ; ಅತ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ವರದಿ
Photo: @nnis_sports \ X
ಹೊಸದಿಲ್ಲಿ: ಚೀನಾದ ಹಾಂಗ್ಝೌನಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿರುವ ಭಾರತದ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಉದೀಪನ ದ್ರವ್ಯ ಸೇವಿಸಿರುವುದು ಪತ್ತೆಯಾಗಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಅತ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ (ಎಐಯು), ಏಶ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಪರೀಕ್ಷೆಗಾಗಿ ಅವರಿಂದ ಮಾದರಿಗಳನ್ನು ಪಡೆದಿತ್ತು.
30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ (DHCMT) ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿವೆ.
ಆರೋಪದ ನೋಟಿಸ್ ನನ್ನು ರಚನಾ ಕುಮಾರಿಗೆ ನೀಡಲಾಗಿದೆ ಎಂದು ಎಐಯು ಶುಕ್ರವಾರ ತನ್ನ ವೆಬ್ಸೈಟ್ ನಲ್ಲಿ ಹೇಳಿದೆ. ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಇದಕ್ಕೂ ಮೊದಲು, ಅವರ ದೇಹದಲ್ಲಿ ಅನಾಬೋಲಿಕ್ ಸ್ಟೀರಾಯ್ಡ್ ಮೆತನೊಲೋನ್ ಪತ್ತೆಯಾದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಉದ್ದೀಪನ ದ್ರವ್ಯ ನಿಷೇಧ ಸಂಸ್ಥೆ (ನಾಡ) ಕುಮಾರಿಗೆ 2015 ಮಾರ್ಚ್ 12ರಿಂದ ನಾಲ್ಕು ವರ್ಷಗಳ ನಿಷೇಧವನ್ನು ಹೇರಿತ್ತು.
ಹಾಲಿ ಪ್ರಕರಣದಲ್ಲಿ, ಅವರು ಉದ್ದೀಪನ ದ್ರವ್ಯ ಸೇವಿಸಿರುವುದು ಸಾಬೀತಾದರೆ, ಅವರು ಗರಿಷ್ಠ ಎಂಟು ವರ್ಷಗಳ ನಿಷೇಧ ಎದುರಿಸಬಹುದಾಗಿದೆ. ಇದು ಅವರ ಎರಡನೇ ಅಪರಾಧವಾಗಿರುವುದರಿಂದ ನಿಷೇಧದ ಅವಧಿಯೂ ದುಪ್ಪಟ್ಟಾಗಲಿದೆ. ಹಾಗೇನಾದರೂ ಆದರೆ, ಅದು ಅವರ ಕ್ರೀಡಾ ಬದುಕಿನ ಕೊನೆಯಾದಂತೆ.
ಏಶ್ಯನ್ ಗೇಮ್ಸ್ ನಲ್ಲಿ 9ನೇ ಸ್ಥಾನ
ರಚನಾ ಕುಮಾರಿ, ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರವರೆಗೆ ಹಾಂಗ್ಝೌನಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ 68 ಸದಸ್ಯರ ಭಾರತೀಯ ಅತ್ಲೆಟಿಕ್ಸ್ ತಂಡದ ಸದಸ್ಯೆಯಾಗಿದ್ದರು. ಸೆಪ್ಟಂಬರ್ 29ರಂದು ನಡೆದ ಮಹಿಳೆಯರ ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಅವರು 58.13 ಮೀಟರ್ ದೂರ ಹ್ಯಾಮರ್ ಎಸೆದು ಒಂಭತ್ತನೇ ಸ್ಥಾನ ಪಡೆದಿದ್ದಾರೆ.
ಜೂನ್ ನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ್-ರಾಜ್ಯ ಚಾಂಪಿಯನ್ಶಿಪ್ಸ್ನಲ್ಲಿ 65.03 ಮೀಟರ್ ದೂರ ಹ್ಯಾಮರ್ ಎಸೆದು ಅವರು ಚಿನ್ನ ಗೆದ್ದಿದ್ದರು. ಇತ್ತೀಚೆಗೆ ನಡೆದ ಗೋವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 59.85 ಮೀಟರ್ ದೂರ ಹ್ಯಾಮರ್ ಎಸೆದು ಅವರು ಕಂಚಿನ ಪದಕ ಗೆದ್ದಿದ್ದಾರೆ. ಆದರೆ, ಅವರು ಯಾವುದೇ ಅಂತರ್ರಾಷ್ಟ್ರೀಯ ಪದಕ ಈವರೆಗೆ ಗೆದ್ದಿಲ್ಲ.
ನನಗೆ ಯಾವುದೇ ಮಾಹಿತಿ ಬಂದಿಲ್ಲ: ರಚನಾ ಕುಮಾರಿ
ವಿದೇಶಿ ಉದ್ದೀಪನ ದ್ರವ್ಯ ಸೇವನೆ ಪರೀಕ್ಷಾ ಸಂಸ್ಥೆಯೊಂದರ ಸಿಬ್ಬಂದಿಗೆ ನಾನು ಸೆಪ್ಟಂಬರ್ 24ರಂದು ಪಾಟಿಯಾಲದಲ್ಲಿ ಮೂತ್ರದ ಮಾದರಿಗಳನ್ನು ನೀಡಿದ್ದೆ ಎಂದು ತನ್ನನ್ನು ಸಂಪರ್ಕಿಸಿದ ಪಿಟಿಐಗೆ ರಚನಾ ಕುಮಾರಿ ಉತ್ತರಪ್ರದೇಶದಲ್ಲಿರುವ ತನ್ನ ಮನೆಯಿಂದ ಹೇಳಿದ್ದಾರೆ.
“ಆದರೆ, ನಾನು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿರುವ ಬಗ್ಗೆ ಈವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ'' ಎಂದು ಅವರು ಹೇಳಿದರು.
ಉದ್ದೀಪನ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ರಚನಾ ಕುಮಾರಿ ಅನುತ್ತೀರ್ಣರಾಗಿದ್ದಾರೆ ಎನ್ನುವುದನ್ನು ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ (ಎಎಫ್ಐ)ನ ಅಧಿಕಾರಿಯೊಬ್ಬರೂ ಖಚತಿಪಡಿಸಿದ್ದಾರೆ. ಆದರೆ, ಅದು ಎಐಯುಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ವಿವರಗಳನ್ನು ನೀಡಲು ನಿರಾಕರಿಸಿದರು.