ಅಮೆರಿಕದಲ್ಲಿ `ಹ್ಯಾಂಡ್ಸ್ ಆಫ್' ಪ್ರತಿಭಟನೆ; 50 ರಾಜ್ಯಗಳಲ್ಲೂ ರ್ಯಾಲಿ
ಟ್ರಂಪ್, ಮಸ್ಕ್ ನೀತಿಯ ವಿರುದ್ಧ ಬೀದಿಗಿಳಿದ ಜನತೆ

PC : NDTV
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸರ್ಕಾರಿ ಕಾರ್ಯದಕ್ಷತೆ(ಡಿಒಜಿಇ) ಇಲಾಖೆ ಮುಖ್ಯ ಸಲಹೆಗಾರ, ಉದ್ಯಮಿ ಎಲಾನ್ ಮಸ್ಕ್ ಅವರ ಕಾರ್ಯನೀತಿಯನ್ನು ವಿರೋಧಿಸಿ ಅಮೆರಿಕ ಸಂಯುಕ್ತ ಸಂಸ್ಥಾನದ 50 ರಾಜ್ಯಗಳಲ್ಲೂ ವ್ಯಾಪಕ `ಹ್ಯಾಂಡ್ಸ್ ಆಫ್' ಪ್ರತಿಭಟನೆ, ರ್ಯಾಲಿ ನಡೆದಿರುವುದಾಗಿ ವರದಿಯಾಗಿದೆ.
ಸರ್ಕಾರಿ ಸಿಬ್ಬಂದಿಗಳ ಪ್ರಮಾಣದಲ್ಲಿ ಕಡಿತ , ಆರ್ಥಿಕ, ಮಾನವ ಹಕ್ಕುಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿ ಆಡಳಿತದ ಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಅನಗತ್ಯ ಕ್ರಮ ಅಥವಾ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆ ನೀಡುವುದನ್ನು `ಹ್ಯಾಂಡ್ಸ್ ಆಫ್' ಪ್ರತಿಭಟನೆ ಸಂಕೇತಿಸುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳನ್ನು ಟ್ರಂಪ್ ಅವರ `ವಿಚ್ಛಿದ್ರಕಾರಕ ಪ್ರಭಾವ'ದಿಂದ ರಕ್ಷಿಸುವ ಬೇಡಿಕೆಯನ್ನು ಈ ಪ್ರತಿಭಟನೆ ಸಂಕೇತಿಸುತ್ತದೆ.
ಮಾನವ ಹಕ್ಕುಗಳ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಚುನಾವಣಾ ಕಾರ್ಯಕರ್ತರು ಸೇರಿದಂತೆ 150ಕ್ಕೂ ಹೆಚ್ಚಿನ ಸಂಸ್ಥೆಗಳು ಸುಮಾರು 1,200 `ಹ್ಯಾಂಡ್ಸ್ ಆಫ್' ಪ್ರತಿಭಟನೆ, ರ್ಯಾಲಿ ಆಯೋಜಿಸಿದ್ದವು. ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್ ಸೇರಿದಂತೆ ಎಲ್ಲಾ 50 ರಾಜ್ಯಗಳ ರಾಜಧಾನಿಯಲ್ಲೂ ಪ್ರತಿಭಟನೆ ನಡೆದಿದೆ.
ಸಾವಿರಾರು ಫೆಡರಲ್ ಸಿಬ್ಬಂದಿಗಳನ್ನು ವಜಾಗೊಳಿಸಿರುವುದು, ಸಾಮಾಜಿಕ ಭದ್ರತಾ ಆಡಳಿತ ಕ್ಷೇತ್ರ ಕಚೇರಿಗಳನ್ನು ಮುಚ್ಚುವುದು, ಸಂಪೂರ್ಣ ಏಜೆನ್ಸಿಗಳನ್ನು ಬಂದ್ ಮಾಡುವುದು, ವಲಸಿಗರ ಗಡೀಪಾರು, ತೃತೀಯ ಲಿಂಗಿಗಳಿಗೆ ರಕ್ಷಣೆ ರದ್ದು, ಆರೋಗ್ಯ ಕಾರ್ಯಕ್ರಮಗಳಿಗೆ ಫೆಡರಲ್ ಅನುದಾನ ಕಡಿತ ಸೇರಿದಂತೆ ಟ್ರಂಪ್ ಆಡಳಿತದ ಕ್ರಮಗಳನ್ನು ಪ್ರತಿಭಟನಾಕಾರರು ಖಂಡಿಸಿದರು.
ಈ ವರ್ಷದ ಜನವರಿ 20ರಂದು ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಅತೀ ದೊಡ್ಡ ಪ್ರತಿಭಟನೆ ಇದಾಗಿದೆ. ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇರದ ಕೆಲಸಗಳನ್ನು ಮಾಡುತ್ತಿದ್ದಾರೆ. ಮಸ್ಕ್ ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಪೊರೇಟ್ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, `ಮಿತ ಜನಾಧಿಪತ್ಯದ ವಿರುದ್ಧ ಹೋರಾಡಿ', ಟ್ರಂಪ್ ರನ್ನು ದೋಷಾರೋಪಣೆಗೆ ಗುರಿಪಡಿಸಿ, ಮಸ್ಕ್ ರನ್ನು ಗಡೀಪಾರು ಮಾಡಿ' ಎಂಬ ಘೋಷಣೆಯನ್ನು ಕೂಗಿದರು. ಬೋಸ್ಟನ್ ನಲ್ಲಿ ನಡೆದ ರ್ಯಾಲಿಯಲ್ಲಿ ಸಾಮಾಜಿಕ ಭದ್ರತೆ ಇಲಾಖೆಯ ಸಿಬ್ಬಂದಿ ಕಡಿತ, ಅಮೆರಿಕದಲ್ಲಿ ವಲಸಿಗರನ್ನು ನಡೆಸಿಕೊಳ್ಳುವ ರೀತಿ ಹಾಗೂ ವಲಸಿಗರ ಗಡೀಪಾರನ್ನು ವಿರೋಧಿಸುವ ಬ್ಯಾನರ್ಗಳನ್ನು ಪ್ರದರ್ಶಿಸಲಾಗಿದೆ. ನ್ಯೂಯಾರ್ಕ್, ಮ್ಯಾಸಚುಸೆಟ್ಸ್, ಓಹಿಯೊ ನಗರಗಳಲ್ಲೂ ಬೃಹತ್ ಪ್ರತಿಭಟನೆ ನಡೆದಿದೆ.
ಪ್ರತಿಭಟನಾ ರ್ಯಾಲಿಗೆ ಪ್ರತಿಕ್ರಿಯಿಸಿರುವ ಶ್ವೇತಭವನ `ಅಧ್ಯಕ್ಷ ಟ್ರಂಪ್ ಅವರು ಮೆಡಿಕೈಡ್(ಮಧ್ಯಮ ಆದಾಯದ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ನೀಡುವ ಸರ್ಕಾರಿ ಕಾರ್ಯಕ್ರಮ), ಮೆಡಿಕೇರ್ ಮತ್ತು ಸಾಮಾಜಿಕ ಭದ್ರತೆಯನ್ನು ರಕ್ಷಿಸಲು ಬದ್ಧರಾಗಿದ್ದಾರೆ' ಎಂದಿದೆ. ಇಂತಹ ಕಾರ್ಯಕ್ರಮಗಳ ಕುರಿತ ಡೆಮಾಕ್ರಟಿಕ್ ಪಕ್ಷದ ನಿಲುವು ಗಂಭೀರ ಆರ್ಥಿಕ ಸಮಸ್ಯೆ ಸೃಷ್ಟಿಸಿದೆ ಎಂದು ಶ್ವೇತಭವನ ಪ್ರತಿಪಾದಿಸಿದೆ.
*ಕಮಲಾ ಹ್ಯಾರಿಸ್ ಬೆಂಬಲ
ಟ್ರಂಪ್ ಹಾಗೂ ಮಸ್ಕ್ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಹ್ಯಾಂಡ್ಸ್ ಆಫ್ ಪ್ರತಿಭಟನೆಯನ್ನು ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಸಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಎದುರು ಸೋತಿರುವ ಹ್ಯಾರಿಸ್ , ಟ್ರಂಪ್ ಆಡಳಿತದ ನೀತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಶ್ಲಾಘಿಸಿದರು ಹಾಗೂ `ನಿಮ್ಮ ಧ್ವನಿ ಆಯ್ಕೆಗೊಳ್ಳದ ಕೋಟ್ಯಾಧಿಪತಿ(ಮಸ್ಕ್)ಯ ಧ್ವನಿಗಿಂತ ಜೋರಾಗಿರಬೇಕು' ಎಂದು ಪ್ರತಿಭಟನಾಕಾರರನ್ನು ಹುರಿದುಂಬಿಸಿದರು.
ಇವತ್ತು ಅಮೆರಿಕದ ಎಲ್ಲಾ ರಾಜ್ಯಗಳನ್ನೂ ಅಮೆರಿಕನ್ನರು ಆಡಳಿತದ ವಿರುದ್ಧ ಎದ್ದುನಿಂತಿದ್ದಾರೆ. ಅಮೆರಿಕದ ಒಳಿತಿಗಾಗಿ ಒಗ್ಗೂಡಿ ಧ್ವನಿ ಎತ್ತಿರುವುದಕ್ಕಾಗಿ ನಿಮಗೆ ಧನ್ಯವಾದಗಳು' ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.