ಹಾಪುರ್ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣ: ತನಿಖೆಯಲ್ಲಿ ನಿರ್ಲಕ್ಷ್ಯ - ಉತ್ತರ ಪ್ರದೇಶ ಪೋಲಿಸರನ್ನು ತರಾಟೆಗೆತ್ತಿಕೊಂಡ ನ್ಯಾಯಾಲಯ
File Photo: PTI
ಹೊಸದಿಲ್ಲಿ: 2018ರಲ್ಲಿ ಉತ್ತರ ಪ್ರದೇಶದ ಹಾಪುರದಲ್ಲಿ ಗೋಹತ್ಯೆಯ ಕಪೋಲಕಲ್ಪಿತ ವದಂತಿಗಳನ್ನು ಹಬ್ಬಿಸಿ ಗುಂಪೊಂದು ಆಡಿನ ವ್ಯಾಪಾರಿಯೋರ್ವನನ್ನು ಥಳಿಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಮಂಗಳವಾರ 10 ಜನರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿರುವ ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳು ಮತ್ತು ನಿರ್ಲಕ್ಷ್ಯಕ್ಕಾಗಿ ರಾಜ್ಯ ಪೋಲಿಸರನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅದು ಶಿಫಾರಸು ಮಾಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ವೇತಾ ದೀಕ್ಷಿತ ಅವರು ತನ್ನ 157ನ ಪುಟಗಳ ತೀರ್ಪಿನಲ್ಲಿ ಗುಂಪು ಆಡಿನ ವ್ಯಾಪಾರಿ ಕಾಸಿಮ್ (45) ಅವರನ್ನು ಥಳಿಸಿ ಹತ್ಯೆಗೈದಿದ್ದನ್ನು ‘ಘೋರ ’ಅಪರಾಧ ಎಂದು ಬಣ್ಣಿಸಿದ್ದಾರೆ. ಅಮಾಯಕ ವ್ಯಕ್ತಿಯೋರ್ವ ಹತ್ಯೆಯಾದ ಹಾಪುರ ಪ್ರಕರಣದಲ್ಲಿ ಗುಂಪಿನ ವರ್ತನೆಯು ಇಡೀ ಸಮಾಜಕ್ಕೆ ಎಚ್ಚರಿಕೆ ಮತ್ತು ಬೆದರಿಕೆಯಾಗಿತ್ತು ಎಂದು ಅವರು ಬೆಟ್ಟು ಮಾಡಿದ್ದಾರೆ.
ಈ ನಡುವೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಸಿಮ್ ಸೋದರ ಸಲೀಂ, ‘ಪ್ರಕರಣದಲ್ಲಿ ಆರೋಪಿಗಳಿಗೆ ವಿಧಿಸಲಾಗಿರುವ ಶಿಕ್ಷೆಯು ದೇಶದಲ್ಲಿ, ವಿಶೇಷವಾಗಿ ಗೋವಿನ ಹೆಸರಿನಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಕೃತ್ಯಗಳನ್ನು ತಡೆಗಟ್ಟುವಲ್ಲಿ ಒಂದು ನಿದರ್ಶನವಾಗಲಿದೆ. ಇದೇ ಕಾರಣದಿಂದ ನಾವು ಅವರನ್ನು ಗಲ್ಲಿಗೇರಿಸದಂತೆ ಮತ್ತು ಅವರು ಪಾಠವನ್ನು ಕಲಿಯುವಂತಾಗಲು ಅವರನ್ನು ಜೀವಿತಾವಧಿಗೆ ಜೈಲಿನಲ್ಲಿ ಕೂಡಿ ಹಾಕುವಂತೆ ನ್ಯಾಯಾಲಯವನ್ನು ಕೋರಿಕೊಂಡಿದ್ದೆವು’ ಎಂದು ಹೇಳಿದರು. ಸಲೀಂ ಬದುಕು ಸಾಗಿಸಲು ತಳ್ಳುಗಾಡಿಯಲ್ಲಿ ಹಣ್ಣುಗಳ ಮಾರಾಟ ಮಾಡುತ್ತಾರೆ.
ನ್ಯಾಯಾಲಯವು ಪ್ರಕರಣದ ತನಿಖಾಧಿಕಾರಿ ಮತ್ತು ಇತರ ಪೋಲಿಸ್ ಸಿಬ್ಬಂದಿಗಳಿಂದ ನಿರ್ಲಕ್ಷ್ಯದ ನಾಲ್ಕು ಅಂಶಗಳನ್ನು ಕಂಡುಕೊಂಡಿದೆ.
ಮೊದಲನೆಯದಾಗಿ,ಮೀರತ್ ವಲಯ ಐಜಿಪಿಯವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿತ್ತಾದರೂ ಪ್ರಕರಣದ ತನಿಖಾಧಿಕಾರಿಯು ಆರೋಪಿಗಳ ಗುರುತಿನ ಪರೇಡ್ ನಡೆಸಿರಲಿಲ್ಲ ಎನ್ನುವುದನ್ನು ನ್ಯಾಯಾಲಯವು ಗಮನಿಸಿದೆ. ಗುಂಪಿನ ಹಿಂಸಾತ್ಮಕ ದಾಳಿಯಿಂದ ಬದುಕುಳಿದಿದ್ದ ಮತ್ತು ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದ ಸಮಯ್ದೀನ್ ಅವರು ಆರೋಪಿಗಳ ಗುರುತು ಪತ್ತೆ ಪರೇಡ್ ನಡೆಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಎರಡನೆಯದಾಗಿ,ಎನ್ಡಿಟಿವಿ ಸುದ್ದಿವಾಹಿನಿಯು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಮುಖ್ಯ ಆರೋಪಿ ರಾಕೇಶ್ ಹತ್ಯೆಯ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದನ್ನು ತೋರಿಸಿದ್ದ ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ಒಡೆದಿತ್ತು ಎನ್ನುವುದನ್ನು ನ್ಯಾಯಾಧೀಶರು ಗಮನಿಸಿದ್ದಾರೆ. ರಾಕೇಶ್ ಸುದ್ದಿವಾಹಿನಿಯ ಕ್ಯಾಮೆರಾದೆದುರು ನೀಡಿದ್ದ ನ್ಯಾಯಾಂಗೇತರ ತಪ್ಪೊಪ್ಪಿಗೆಯು ಪ್ರಕರಣದಲ್ಲಿಯ ಹಾಲಿ ಸಾಕ್ಷ್ಯಗಳನ್ನು ದೃಢಪಡಿಸುವ ಪುರಾವೆಯಾಗಿತ್ತು ಎಂದು ಹೇಳಿರುವ ನ್ಯಾ. ದೀಕ್ಷಿತ್, ಸಾಕ್ಷ್ಯವಾಗಿ ಸಲ್ಲಿಸಲಾಗಿದ್ದ ಸಿಡಿಯನ್ನು ಸುರಕ್ಷಿತವಾಗಿ ಇಡದಿದ್ದುದು ಅತ್ಯಂತ ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ಗುಂಪಿನಿಂದ ಥಳಿಸಿ ಹತ್ಯೆಯ ಘಟನೆಯ ವೀಡಿಯೊವನ್ನು ಅರ್ಹ ಸಾಕ್ಷ್ಯವನ್ನಾಗಿಸಲು ಸಿಡಿಯ ಅಗತ್ಯ ಪ್ರಮಾಣಪತ್ರವನ್ನು ದೋಷಾರೋಪ ಪಟ್ಟಿಯೊಂದಿಗೆ ಸಲ್ಲಿಸದ್ದಕ್ಕಾಗಿ ತನಿಖಾಧಿಕಾರಿ ಲಕ್ಷಣ ವರ್ಮಾ ನಿರ್ಲಕ್ಷ್ಯದ ತಪ್ಪೆಸಗಿದ್ದಾರೆ ಎಂದು ಬೆಟ್ಟು ಮಾಡಿದ್ದಾರೆ. ಸಲೀಂ ಗುಂಪು ತನ್ನ ಸೋದರನನ್ನು ಥಳಿಸುತ್ತಿದ್ದ ವೀಡಿಯೊವನ್ನು ತನ್ನ ಫೋನ್ನಲ್ಲಿ ಸ್ವೀಕರಿಸಿದ್ದರು.
ಅಪರಾಧದಲ್ಲಿ ಬಳಕೆಯಾಗಿದ್ದ ಮತ್ತು ಆರೋಪಿಯೋರ್ವನಿಂದ ವಶಪಡಿಸಿಕೊಳ್ಳಲಾಗಿದ್ದ ಲಾಠಿಯನ್ನು ರಕ್ತ ಮತ್ತು ಬೆರಳಚ್ಚುಗಳ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸದೇ ಪೋಲಿಸರ ಮೂರನೇ ಲೋಪವೆಸಗಿದ್ದಾರೆ ಎಂದು ನ್ಯಾ.ದೀಕ್ಷಿತ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ತನ್ನ ಸಹಿಯೊಂದಿಗೆ 2018,ಜೂ.16ರಂದು ಪ್ರಕರಣದಲ್ಲಿ ಸಲ್ಲಿಸಿದ್ದ ಎಫ್ಐಆರ್ನ್ನು ಪೋಲಿಸರ ಒತ್ತಡದಡಿ ರಚಿಸಲಾಗಿತ್ತು ಮತ್ತು ಸುಳ್ಳು ಮಾಹಿತಿಯನ್ನು ಆಧರಿಸಿತ್ತು ಎಂಬ ಗುಂಪಿನ ದಾಳಿಯಿಂದ ಬದುಕುಳಿದಿದ್ದ ಸಮಯ್ದೀನ್ ಅವರ ಸೋದರ ಯಾಸೀನ್ ಆರೋಪವು ನ್ಯಾಯಾಲಯವು ಪೋಲಿಸರನ್ನು ತರಾಟೆಗೆತ್ತಿಕೊಂಡ ನಾಲ್ಕನೇ ಅಂಶವಾಗಿದೆ.
ಮೊದಲ ಎಫ್ಐಆರ್ನಲ್ಲಿ ಕಾಸಿಮ್ ಸಾವು ಬೈಕ್ ಅಪಘಾತದಿಂದಾಗಿ ಸಂಭವಿಸಿದೆ ಎಂದು ಹೇಳಲಾಗಿತ್ತು. ಪೋಲಿಸರ ಒತ್ತಡದಡಿ ಆ ಎಫ್ಐಆರ್ನ್ನು ಬರೆಯಲಾಗಿತ್ತು ಮತ್ತು ಬೈಕ್ ಅಪಘಾತ ಕಪೋಲಕಲ್ಪಿತವಾಗಿತ್ತು ಎಂದು ಯಾಸಿನ್ ಮತ್ತು ಸಮಯ್ದೀನ್ ಬಳಿಕ ಪ್ರತಿಪಾದಿಸಿದ್ದರು.