ಪತಿಯ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು
ಗುರುಗಾಂವ್: ಇಲ್ಲಿಗೆ ಸಮೀಪದ ಫಾರೂಕ್ ನಗರದ ಸುಂದರಪುರ ಜರವು ಎಂಬಲ್ಲಿ ಸೋಮವಾರ 28 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಶವದ ಪಕ್ಕದಲ್ಲೇ ಪತಿ ಪಾನಮತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವರದಕ್ಷಿಣೆ ತರುವಂತೆ ಗಂಡ ನಿರಂತರವಾಗಿ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಅಟಾಪ್ಸಿ ವರದಿಯ ಪ್ರಕಾರ, ಪೂನಂ ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈಕೆಯ ವಿವಾಹ 2015ರಲ್ಲಿ ಮಂಗತ್ ರಾಂ ಎಂಬಾತನ ಜತೆ ನಡೆದಿತ್ತು.
ಪೂನಂ ಕುಟುಂಬ ಭಾರತೀಯ ದಂಡಸಂಹಿತೆ ಸೆಕ್ಷನ್ 302ರ ಪ್ರಕಾರ ಪತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದೆ. ಮೆಕ್ಯಾನಿಕ್ ಆಗಿರುವ ಮಂಗತ್ ಇದೀಗ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಎಎಸ್ಐ ರಾಜೇಶ್ ಹೇಳಿದ್ದಾರೆ.
ಪೂನಂ ತಂಗಿ ಪ್ರಿಯಾ ನೀಡಿದ ದೂರಿನ ಪ್ರಕಾರ, ಸೋಮವಾರ ಪೂನಂ ಮನೆಗೆ ಭೇಟಿ ನೀಡಿದಾಗ ಬೆಳಿಗ್ಗೆ 8ರ ಸುಮಾರಿಗೆ ವಾಷ್ರೂಂನ ಹೊರಗೆ ಪೂನಂ ಶವ ಪತ್ತೆಯಾಗಿದೆ. ಮಂಗತ್ ಪಾನಮತ್ತ ಸ್ಥಿತಿಯಲ್ಲಿ ಶವದ ಪಕ್ಕ ಕುಳಿತಿದ್ದ. ಪೊಲೀಸರಿಗೆ ಮಾಹಿತಿ ನೀಡುವ ಮುನ್ನ ಪ್ರಿಯಾ ಕರೆ ಮಾಡಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಪೂನಂ ಸಾಯುವ ಹಿಂದಿನ ದಿನ ರಾತ್ರಿ ಆಕೆ ಸಹೋದರ ಹೇಮಂತ್ ಕುಮಾರ್ ಗೆ ಕರೆ ಮಾಡಿ ಪತಿಯ ಬಗ್ಗೆ ದೂರಿದ್ದಳು. ಇದಕ್ಕೆ ಪ್ರತಿಕ್ರಿಯಿಸುವ ಮುನ್ನ ಕರೆ ಸ್ಥಗಿತಗೊಂಡಿತ್ತು. ಸಾಕಷ್ಟು ವರದಕ್ಷಿಣೆ ತಂದಿಲ್ಲ ಎಂಬ ಕಾರಣಕ್ಕೆ ಮಂಗತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.