ಟ್ವೆಂಟಿ-20 ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ಸೇರ್ಪಡೆ ಐಪಿಎಲ್ ಬೌಲಿಂಗ್ ಪ್ರದರ್ಶನ ಅವಲಂಬಿಸಿದೆ: ವರದಿ
ಹಾರ್ದಿಕ್ ಪಾಂಡ್ಯ | PC :PTI
ಹೊಸದಿಲ್ಲಿ: ಭಾರತದ ನಾಯಕ ರೋಹಿತ್ ಶರ್ಮಾ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯ ವೇಳೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಮುಂಬೈನಲ್ಲಿ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಮುಂಬರುವ ಟ್ವೆಂಟಿ-20 ವಿಶ್ವಕಪ್ ನಲ್ಲಿ ತಂಡದ ಸಂಯೋಜನೆಯು ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಬಂದಿರುವ ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತಂತೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷದ ಐಪಿಎಲ್ ನಲ್ಲಿ ನಿರಂತರವಾಗಿ ಬೌಲಿಂಗ್ ಮಾಡಿದರೆ ಮಾತ್ರ ಪಾಂಡ್ಯಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಕಲ್ಪಿಸಲು ಮೂವರು ನಿರ್ಧರಿಸಿದ್ದಾರೆ.
ಈ ವರ್ಷದ ಜೂನ್ ನಲ್ಲಿ ಅಮೆರಿಕ ಹಾಗೂ ಕೆರಿಬಿಯನ್ ದ್ವೀಪದ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಸೇರಿಸಿಕೊಳ್ಳುವ ಕುರಿತಂತೆ ಸಭೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಉತ್ತಮ ಆಯ್ಕೆಗಳು ಸೀಮಿತವಾಗಿ ಲಭ್ಯವಿರುವುದರಿಂದ ಆಯ್ಕೆಗಾರರು ಸವಾಲನ್ನು ಎದುರಿಸುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಆಲ್ರೌಂಡರ್ ಶಿವಂ ದುಬೆ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದು, ಸಾಕಷ್ಟು ಬೌಲಿಂಗ್ ಸಂಪತ್ತು ಇರುವ ಕಾರಣ ಚೆನ್ನೈ ತಂಡ ಅವರನ್ನು ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳುತ್ತಿದೆ. ದುಬೆ ಅವರ ಪ್ರದರ್ಶನದ ಮೇಲೆ ಆಯ್ಕೆ ಸಮಿತಿಯು ಚಿತ್ತಹರಿಸಿದೆ.
ಪ್ರಸಕ್ತ ಋತುವಿನ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನ್ನು ವಹಿಸಿರುವ ಹಾರ್ದಿಕ್ ಪಾಂಡ್ಯ ಬೌಲಿಂಗ್ ಫಾರ್ಮ್ನಲ್ಲಿ ಪರದಾಡುತ್ತಿದ್ದಾರೆ. ಆರು ಪಂದ್ಯಗಳಲ್ಲಿ 11 ಓವರ್ ಗಳನ್ನು ಬೌಲಿಂಗ್ ಮಾಡಿರುವ ಪಾಂಡ್ಯ ಕೇವಲ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಆದರೆ ಪ್ರತಿ ಓವರ್ಗೆ 12 ರನ್ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಸರಿಯಾದ ಸಮಯಕ್ಕೆ ತನ್ನ ಲಯವನ್ನು ಕಂಡುಕೊಂಡು ಆಡುವ 11ರ ಬಳಗದಲ್ಲಿ ಬೌಲಿಂಗ್ಗೆ ಸಮತೋಲನ ಒದಗಿಸಲಿದ್ದಾರೆ ಎಂದು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ. ಪಾಂಡ್ಯ ಅವರ ಪವರ್ಫುಲ್ ಹಿಟ್ಟಿಂಗ್ ಭಾರತದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಲಿದೆ.
ಭಾರತೀಯ ಆಯ್ಕೆ ಸಮಿತಿಯು ಟಿ-20 ವಿಶ್ವಕಪ್ಗೆ ತಂಡವನ್ನು ಅಂತಿಮಗೊಳಿಸಲು ಈ ತಿಂಗಳಾಂತ್ಯದಲ್ಲಿ ಮತ್ತೆ ಸಭೆ ಸೇರಲಿದೆ. ಈಗ ನಡೆಯುತ್ತಿರುವ ಐಪಿಎಲ್ನಲ್ಲಿ ಪಾಂಡ್ಯ ಅವರ ಪ್ರದರ್ಶನವು ನಿರ್ಧಾರದ ಪ್ರಕ್ರಿಯೆ ಮೇಲೆ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.