ಹಾನಿಕಾರಕ ರಾಸಾಯನಿಕ ಪತ್ತೆ: ಭಾರತ ಮೂಲದ ಎವರೆಸ್ಟ್, ಎಂಡಿಎಚ್ ಮಸಾಲೆ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ ನೇಪಾಳ
Photocredit : indiatoday.in
ಕಠ್ಮಂಡು: ಎವರೆಸ್ಟ್ ಹಾಗೂ ಎಂಡಿಎಚ್ ಮಸಾಲೆ ಪದಾರ್ಥಗಳ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿರುವುದರಿಂದ, ಸಿಂಗಾಪುರ ಹಾಗೂ ಹಾಂಗ್ ಕಾಂಗ್ ನಂತರ ನೇಪಾಳ ಅವುಗಳ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಈ ಎರಡು ಭಾರತದ ಬ್ರ್ಯಾಂಡ್ ಗಳ ಮಸಾಲೆ ಪದಾರ್ಥಗಳ ಮೇಲೆ ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಕ್ಯಾನ್ಸರ್ ಕಾರಕ ಕ್ರಿಮಿನಾಶಕವಾದ ಎಥಿಲೀನ್ ಆಕ್ಸೈಡ್ ಪತ್ತೆ ಪರೀಕ್ಷೆಯನ್ನು ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೇಪಾಳ ಆಹಾರ ತಂತ್ರಜ್ಞಾನ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹಾಜನ್, “ಎವರೆಸ್ಟ್ ಹಾಗೂ ಎಂಡಿಎಚ್ ಮಸಾಲೆ ಪದಾರ್ಥಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ. ನಾವು ಮಾರುಕಟ್ಟೆಯಲ್ಲಿ ಅವುಗಳ ಮಾರಾಟವನ್ನೂ ನಿಷೇಧಿಸಿದ್ದೇವೆ. ಮಸಾಲೆ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿವೆ ಎಂಬ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಈ ನಿರ್ದಿಷ್ಟ ಬ್ರ್ಯಾಂಡ್ ಗಳ ಮಸಾಲೆ ಪದಾರ್ಥಗಳಲ್ಲಿನ ರಾಸಾಯನಿಕಗಳ ಕುರಿತು ಪರೀಕ್ಷೆಗಳು ಪ್ರಗತಿಯಲ್ಲಿವೆ. ಅಂತಿಮ ವರದಿ ಬರುವವರೆಗೂ ಈ ನಿಷೇಧ ಜಾರಿಯಲ್ಲಿರುತ್ತದೆ” ಎಂದೂ ಮಹಾಜನ್ ತಿಳಿಸಿದ್ದಾರೆ.
ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಪದಾರ್ಥ ಉತ್ಪನ್ನಗಳು ಹಲವಾರು ದಶಕಗಳಿಂದ ಭಾರತದಲ್ಲಿ ಮನೆಮಾತಾಗಿದ್ದು, ಅವುಗಳ ವೈವಿಧ್ಯಿಮಯ ಮಸಾಲೆ ಪದಾರ್ಥಗಳು ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಜಗತ್ತಿನ ಹಲವಾರು ದೇಶಗಳು ರಫ್ತಾಗುತ್ತಿವೆ.
ನ್ಯೂಝಿಲೆಂಡ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲೂ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಪದಾರ್ಥಗಳ ಕುರಿತು ಕಳವಳ ವ್ಯಕ್ತವಾಗಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.