ಹರ್ಯಾಣದಲ್ಲಿ ಏಕಾಂಗಿಯಾಗಿ ಸ್ಪರ್ಧೆ | ‘ಇಂಡಿಯಾ’ ಮೈತ್ರಿಕೂಟಕ್ಕೆ ದ್ರೋಹ ಬಗೆದ ಆಪ್
ಸ್ವಾತಿ ಮಲಿವಾಲ್ | PTI
ಹೊಸದಿಲ್ಲಿ : ಹರ್ಯಾಣ ವಿಧಾನಸಭೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವ ಮೂಲಕ ಆಮ್ ಆದ್ಮಿ ಪಕ್ಷವು ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಬಗೆದಿದೆಯೆಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಂಗಳವಾರ ಆಪಾದಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದಲೇ ಆಮ್ ಆದ್ಮಿ ಪಕ್ಷವು ಹರ್ಯಾಣದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ.ಈ ಮೂಲಕ ಅದು ಪ್ರತಿಪಕ್ಷ ಮೈತ್ರಿಕೂಟದ ಏಕತೆಗೆ ದ್ರೋಹ ಬಗೆದಿದೆ. ಕಾಂಗ್ರೆಸನ್ನು ದುರ್ಬಲಗೊಳಿಸುವ ಏಕಮಾತ್ರ ಉದ್ದೇಶದಿಂದಲೇ ಆಮ್ ಆದ್ಮಿ ಪಕ್ಷವು ಹರ್ಯಾಣದಲ್ಲಿ ಚುನಾವಣಾ ಕಣವನ್ನು ಪ್ರವೇಶಿಸಿತ್ತು’’ ಎಂದು ಮಲಿವಾಲ್ , ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘‘ ನನ್ನನ್ನು ಬಿಜೆಪಿ ಏಜೆಂಟಳೆಂದು ಆಪ್ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿತ್ತು. ಆದರೆ ಈಗ ಅದು ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹವೆಸಗಿದೆ. ಬಿಜೆಪಿಯನ್ನು ಸೋಲಿಸುವ ಬಗ್ಗೆ ಗಮನಹರಿಸುವ ಬದಲು ಕಾಂಗ್ರೆಸ್ಗೆ ಹಾನಿ ಮಾಡುವ ಏಕಮಾತ್ರ ಉದ್ದೇಶದಿಂದ ಆಮ್ ಆದ್ಮಿ ಪಕ್ಷವು ಕುಸ್ತಿಪಟು ವಿನೇಶ್ ಪೋಗಟ್ರಂತವರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು”, ಎಂದು ಮಲಿವಾಲ್ ಹೇಳಿದರು.
ಆಪ್ ನಾಯಕ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ‘ಎಕ್ಸ್’ನಲ್ಲಿ ಟೀಕಾ ಪ್ರಹಾರ ನಡೆಸಿದ ಮಲಿವಾಲ್, ಅವರು ‘‘ನಿಮ್ಮ ತವರು ರಾಜ್ಯವಾದ ಹರ್ಯಾಣದಲ್ಲಿಯೇ ಆಪ್ ಅಭ್ಯರ್ಥಿಗಳಿಗೆ ತಮ್ಮ ಠೇವಣಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯುಂಟಾಗಿದೆ. ಆದರೆ ಇನ್ನೂ ಸಮಯ ಮೀರಿಲ್ಲ. ನಿಮ್ಮ ಅಹಂ ತ್ಯಜಿಸಿರಿ. ನಿಮ್ಮ ಕಣ್ಣುಗಳಿಂದ ಪರದೆಯನ್ನು ಸರಿಸಿ, ಜನರಿಗಾಗಿ ದುಡಿಯಿರಿ ’’ ಎಂದು ಕರೆ ನೀಡಿದ್ದಾರೆ.
ಮಂಗಳವಾರ ನಡೆದ ಹರ್ಯಾಣ ವಿಧಾನಸಭಾ ಚುನಾವಣೆಯ ಮತ ಏಣಿಕೆಯ ಪ್ರಾಥಮಿಕ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸತೊಡಗಿದ ಬೆನ್ನಲ್ಲೇ ಮಲಿವಾಲ್ ಎಕ್ಸ್ನಲ್ಲಿ ಈ ಪೋಸ್ಟ್ ಪ್ರಕಟಿಸಿದ್ದಾರೆ.