ಹರ್ಯಾಣದಲ್ಲಿ ಖಾತೆ ತೆರೆಯಲು ವಿಫಲವಾದ ಎಎಪಿ; 87 ಕ್ಷೇತ್ರಗಳಲ್ಲಿ ಠೇವಣಿ ನಷ್ಟ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಭಾವನಾತ್ಮಕ ಮನವಿಯ ಹೊರತಾಗಿಯೂ, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಆಪ್ ನ 87 ಅಭ್ಯರ್ಥಿಗಳು ಈ ಬಾರಿ ಠೇವಣಿ ನಷ್ಟ ಅನುಭವಿಸಿದ್ದು, ಆಪ್ ಪಕ್ಷ ಗಳಿಸಿರುವ ಒಟ್ಟಾರೆ ಮತ ಪ್ರಮಾಣ ಶೇ. 2 ಅನ್ನೂ ದಾಟಲಾಗಿಲ್ಲ.
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆಪ್ ನ ರಾಷ್ಟ್ರೀಯ ಸಂಚಾಲಕರೂ ಆದ ಅರವಿಂದ್ ಕೇಜ್ರಿವಾಲ್, ತಮ್ಮನ್ನು ತಾವು ಹರ್ಯಾಣದ ಪುತ್ರ ಎಂದು ಭಾವನಾತ್ಮಕ ಪ್ರಚಾರ ನಡೆಸಿದರೂ, ಭಿವಾನಿ ಜಿಲ್ಲೆಯ ಅವರ ತವರು ಕ್ಷೇತ್ರವಾದ ಸಿವಾನಿಯಲ್ಲೇ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಹತ್ತಾರು ರೋಡ್ ಶೋ ಹಾಗೂ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದರು.
ನಾನು ಪ್ರಮಾಣಿಕನಾಗಿದ್ದರೆ ನನಗೆ ಮತ ಚಲಾಯಿಸಿ ಎಂದು ಅರವಿಂದ್ ಕೇಜ್ರಿವಾಲ್ ಭಾವನಾತ್ಮಕ ಪ್ರಚಾರ ನಡೆಸಿದರೂ, ಅದು ಅವರಿಗೆ ಮತ ತರುವಲ್ಲಿ ವಿಫಲವಾಗಿದೆ. ಭಾರಿ ಚುನಾವಣಾ ಪ್ರಚಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯ, ಸಂಸದ ಸಂಜಯ್ ಸಿಂಗ್ ಹಾಗೂ ರಾಘವ್ ಚಡ್ಡಾ, ಬಿಜೆಪಿಯ ಮೇಲೆ ನೇರ ವಾಗ್ದಾಳಿ ನಡೆಸಿದ್ದರು. ಹೀಗಿದ್ದೂ, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ನಿರುದ್ಯೋಗ, ಏರುತ್ತಿರುವ ಭ್ರಷ್ಟಾಚಾರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು ಆಪ್ ಪ್ರಚಾರದುದ್ದಕ್ಕೂ ಪ್ರಸ್ತಾಪಿಸಿತ್ತು.