ಹರ್ಯಾಣ | 23 ಕೋಟಿ ರೂ.ಮೌಲ್ಯದ 1.5 ಟನ್ ತೂಗುವ ಈ ‘ಅನ್ಮೋಲ್’ ದಿನಕ್ಕೆ 20 ಮೊಟ್ಟೆಗಳನ್ನು ತಿನ್ನುತ್ತಾನೆ!
Screengrab photo : X
ಚಂಡಿಗಡ : ಹರ್ಯಾಣದ 23 ಕೋಟಿ ರೂ.ಮೌಲ್ಯದ ‘ಅನ್ಮೋಲ್’ ಹೆಸರಿನ ಕೋಣ ದೇಶಾದ್ಯಂತ ಕೃಷಿ ಮೇಳಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. 1,500 ಕೆ.ಜಿ.ತೂಗುವ ಈ ಕೋಣ ಪುಷ್ಕರ್ ಮೇಳ ಮತ್ತು ಮೀರತ್ನಲ್ಲಿ ನಡೆದಿದ್ದ ಅಖಿಲ ಭಾರತ ಕೃಷಿಕರ ಮೇಳದಂತಹ ಕಾರ್ಯಕ್ರಮಗಳಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ತನ್ನ ಭಾರೀ ಗಾತ್ರ, ವಂಶಾವಳಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಕ್ಕಾಗಿ ಹೆಸರಾಗಿರುವ ಅನ್ಮೋಲ್ ಸಾಮಾಜಿಕ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ.
ಅನ್ಮೋಲ್ ನ ಐಷಾರಾಮಿ ಜೀವನಶೈಲಿ ತುಂಬ ದುಬಾರಿಯದಾಗಿದೆ. ಅದರ ಆಹಾರಕ್ಕಾಗಿ ಮಾಲಿಕ ಗಿಲ್ ಪ್ರತಿದಿನ ಸುಮಾರು 1,500 ರೂ.ಗಳನ್ನು ವೆಚ್ಚ ಮಾಡುತ್ತಾರೆ. ಅದರ ಆರೋಗ್ಯ ಮತ್ತು ಶಕ್ತಿಯನ್ನು ಕಾಯ್ದುಕೊಳ್ಳಲು ಮಿಶ್ರ ಒಣಹಣ್ಣುಗಳು ಮತ್ತು ಅಧಿಕ ಕ್ಯಾಲರಿಯ ಆಹಾರಗಳನ್ನು ಅದಕ್ಕೆ ನೀಡಲಾಗುತ್ತದೆ.
Meet Anmol, a buffalo from Haryana worth ₹23 crore introduced in Pushkar fair. Weighing in at 1500 kg, this giant is pampered with a daily diet that includes dry fruits and 20 eggs, along with regular almond oil massages.https://t.co/kwKCCdRXfd#pushkarfair #Haryana #Trending pic.twitter.com/0cPie9DQ2H
— Younish P (@younishpthn) November 14, 2024
ಅನ್ಮೋಲ್ನ ಊಟದ ಮೆನು 250 ಗ್ರಾಂ. ಬಾದಾಮ್, 30 ಬಾಳೆಹಣ್ಣುಗಳು, ನಾಲ್ಕು ಕೆ.ಜಿ.ದಾಳಿಂಬೆ, ಐದು ಲೀಟರ್ ಹಾಲು ಮತ್ತು 20 ಮೊಟ್ಟೆಗಳನ್ನು ಒಳಗೊಂಡಿದೆ. ಜೊತೆಗೆ ಹಿಂಡಿ, ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಮೆಕ್ಕೆಜೋಳವನ್ನೂ ಅದಕ್ಕೆ ತಿನ್ನಿಸಲಾಗುತ್ತದೆ. ಈ ವಿಶೇಷ ಆಹಾರ ಅನ್ಮೋಲ್ ನನ್ನು ಸದಾ ಪ್ರದರ್ಶನಗಳಿಗಾಗಿ ಮತ್ತು ಸಂತಾನೋತ್ಪತ್ತಿಗಾಗಿ ಸನ್ನದ್ಧವಾಗಿರಿಸುತ್ತದೆ.
ಕೋಣಕ್ಕೆ ನಿತ್ಯ ಎರಡು ಸಲ ಮಜ್ಜನ ಮಾಡಿಸಲಾಗುತ್ತದೆ. ಬಾದಾಮ್ ಮತ್ತು ಸಾಸಿವೆ ತೈಲಗಳ ವಿಶೇಷ ಮಿಶ್ರಣವು ಅದರ ಚರ್ಮಕ್ಕೆ ಹೊಳಪನ್ನು ನೀಡುವ ಜೊತೆಗೆ ಆರೋಗ್ಯಯುತವಾಗಿರಿಸುತ್ತದೆ.
ಗಣನೀಯ ವೆಚ್ಚವಾಗುತ್ತಿದ್ದರೂ ಅನ್ಮೋಲ್ ಗೆ ಅತ್ಯುತ್ತಮ ಆರೈಕೆ ಒದಗಿಸಲು ಗಿಲ್ ಬದ್ಧರಾಗಿದ್ದಾರೆ. ಅನ್ಮೋಲ್ ನ ಸಾಕಣೆ ವೆಚ್ಚವನ್ನು ಸರಿದೂಗಿಸಲು ಅವರು ಹಿಂದೆ ಅದರ ತಾಯಿ ಮತ್ತು ಸೋದರಿಯನ್ನು ಮಾರಾಟ ಮಾಡಿದ್ದರು. ಅನ್ಮೋಲ್ ನ ತಾಯಿ ದಿನಕ್ಕೆ 25 ಲೀ.ಹಾಲನ್ನು ನೀಡುವ ಮೂಲಕ ಪ್ರಸಿದ್ಧಿಯನ್ನು ಪಡೆದಿತ್ತು.
ಅನ್ಮೋಲ್ ನ ಭಾರೀ ಗಾತ್ರ ಮತ್ತು ಆಹಾರ ಪದ್ಧತಿ ವಿಶೇಷವಾಗಿದ್ದರೂ ಅದಕ್ಕೆ ನಿಜವಾದ ಬೆಲೆಯನ್ನು ತಂದಿರುವುದು ಅದರ ಸಂತಾನೋತ್ಪತ್ತಿ ಸಾಮರ್ಥ್ಯ. ವಾರಕ್ಕೆರಡು ಬಾರಿ ಸಂಗ್ರಹಿಸಲಾಗುವ ಈ ಕೋಣದ ವೀರ್ಯಕ್ಕೆ ಬಹಳಷ್ಟು ಬೇಡಿಕೆಯಿದೆ. ಒಂದು ಬಾರಿಯ ವೀರ್ಯವನ್ನು ನೂರಾರು ಜಾನುವಾರುಗಳ ಗರ್ಭಧಾರಣೆಗೆ ಬಳಸಲಾಗುತ್ತಿದೆ. ವೀರ್ಯ ಮಾರಾಟದಿಂದ ಮಾಸಿಕ 4ರಿಂದ 5 ಲಕ್ಷ ರೂ.ಆದಾಯ ಲಭಿಸುತ್ತಿದ್ದು, ಇದು ಕೋಣವನ್ನು ಸಾಕಲು ಹೆಚ್ಚಿನ ವೆಚ್ಚವನ್ನು ನಿಭಾಯಿಸಲು ಗಿಲ್ ಗೆ ನೆರವಾಗುತ್ತಿದೆ.
23 ಕೋಟಿ ರೂ.ಗಳಿಗೆ ಅನ್ಮೋಲ್ ಖರೀದಿಗಾಗಿ ಹಲವಾರು ಕೊಡುಗೆಗಳು ಬಂದಿದ್ದರೂ ಅದನ್ನು ಕುಟುಂಬ ಸದಸ್ಯನಂತೆ ನೋಡಿಕೊಳ್ಳುತ್ತಿರುವ ಗಿಲ್ ಅದನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿಲ್ಲ.