ಹರ್ಯಾಣ | ಭಾಕ್ರಾ ನಾಲೆಗೆ ಕ್ರೂಸರ್ ಕಾರು ಉರುಳಿ 9 ಮಂದಿ ಮೃತ್ಯು, ಮೂರು ಮಂದಿ ನಾಪತ್ತೆ

ಸಾಂದರ್ಭಿಕ ಚಿತ್ರ | PC : PTI
ಚಂಡೀಗಢ: 14 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಫೋರ್ಸ್ ಮೋಟರ್ಸ್ ಸಂಸ್ಥೆಯ ಕ್ರೂಸರ್ ಕಾರು ಹರ್ಯಾಣದ ಫತೇಬಾದ್ ಬಳಿಯ ಭಾಕ್ರಾ ನಾಲೆಗೆ ಉರುಳಿದ ಪರಿಣಾಮ, ಐವರು ಮಹಿಳೆಯರು ಸೇರಿದಂತೆ 9 ಮಂದಿ ಮೃತಪಟ್ಟು, ಮೂರು ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಓರ್ವ ಪುರುಷ ಹಾಗೂ 11 ವರ್ಷದ ಬಾಲಕನನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ರಾತಿಯಾದಲ್ಲಿನ ಸರ್ದಾರ್ ವಾಲೆ ಗ್ರಾಮದ ಪ್ರದೇಶದಲ್ಲಿ ದಟ್ಟ ಮಂಜು ಮುಸುಕಿದ್ದುದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಯಾಣಿಕರ ಪೈಕಿ ಬಹುತೇಕರು ಮೆಹ್ಮರಾ ಗ್ರಾಮದವರಾಗಿದ್ದು, ಅವರೆಲ್ಲ ಪಂಜಾಬ್ ನ ಫಝಿಲ್ಕಾ ಜಿಲ್ಲೆಯಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ ಒಂಬತ್ತು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಮೂವರು ಪ್ರಯಾಣಿಕರ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ರಾತಿಯಾ) ಸಂಜಯ್ ಕುಮಾರ್ ಹೇಳಿದ್ದಾರೆ.
ಮೃತಪಟ್ಟಿರುವ ಒಂಬತ್ತು ಮಂದಿಯ ಪೈಕಿ ಐವರು ಮಹಿಳೆಯರು ಹಾಗೂ ಓರ್ವ 11 ವರ್ಷದ ಬಾಲಕಿ ಸೇರಿದ್ದಾಳೆ ಎಂದು ಅವರು ತಿಳಿಸಿದ್ದಾರೆ.