ಹರ್ಯಾಣ ವಿಧಾನಸಭೆ ಚುನಾವಣೆ: ಟಿಕೆಟ್ ನಿರಾಕರಿಸಿದ್ದಕ್ಕೆ ಕಣ್ಣೀರಿಟ್ಟ ಬಿಜೆಪಿ ಶಾಸಕ
ಶಶಿ ರಂಜನ್ ಪಾರ್ಮರ್ | PC: NDTV
ಚಂಡೀಗಢ: ಹರ್ಯಾಣದ ಹಾಲಿ ಬಿಜೆಪಿ ಶಾಸಕನಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಈ ಸಂಬಂಧ ಸಂದರ್ಶನವೊಂದರಲ್ಲಿ ಶಾಸಕ ಶಶಿ ರಂಜನ್ ಪಾರ್ಮರ್ ಗದ್ಗದಿತರಾಗಿರುವ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ತಮಗೆ ಟಿಕೆಟ್ ನಿರಾಕರಣೆಯಾಗಿರುವ ಕುರಿತು ಶಶಿ ರಂಜನ್ ಪಾರ್ಮರ್ ಅವರನ್ನು ಸಂದರ್ಶನಕಾರ ಪ್ರಶ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಶಶಿ ರಂಜನ್ ಪಾರ್ಮರ್ ಹರ್ಯಾಣದ ಭಿವಾನಿ ಮತ್ತು ತೋಶಮ್ನಿಂದ ಬಿಜೆಪಿ ಟಿಕೆಟ್ನ ಆಕಾಂಕ್ಷಿಯಾಗಿದ್ದರು.
"ನನ್ನ ಹೆಸರು ಪಟ್ಟಿಯಲ್ಲಿರುತ್ತದೆ ಎಂದು ಭಾವಿಸಿದ್ದೆ" ಎಂದು ಪಾರ್ಮರ್ ಹೇಳುತ್ತಿರುವುದನ್ನು ಆ ವಿಡಿಯೊದಲ್ಲಿ ಕಾಣಬಹುದಾಗಿದೆ.
"ನಾನು ನನ್ನ ಕ್ಷೇತ್ರದ ಜನರಿಗೆ ನನ್ನ ಹೆಸರನ್ನು ಪರಿಗಣಿಸಲಾಗಿದೆ ಎಂದು ಭರವಸೆ ನೀಡಿದ್ದೆ. ನಾನೀಗ ಏನು ಮಾಡಲಿ? ನಾನು ಅಸಹಾಯಕನಾಗಿದ್ದೇನೆ" ಎಂದು ಪಾರ್ಮರ್ ಹೇಳುತ್ತಿರುವುದನ್ನು ಕೇಳಬಹುದಾಗಿದೆ.
"ನನಗೇನಾಗುತ್ತಿದೆ? ನನ್ನನ್ನು ನಡೆಸಿಕೊಂಡಿರುವ ರೀತಿಯಿಂದ ನನಗೆ ತುಂಬಾ ನೋವಾಗಿದೆ. ಎಂಥ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ?" ಎಂದು ಪಾರ್ಮರ್ ಗದ್ಗದಿತರಾಗಿ ಪ್ರಶ್ನಿಸಿರುವುದು ಆ ವಿಡಿಯೊದಲ್ಲಿ ಸೆರೆಯಾಗಿದೆ.
ಅಕ್ಟೋಬರ್ 5ರಂದು ಹರ್ಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.