ಹರ್ಯಾಣ ವಿಧಾನಸಭಾ ಚುನಾವಣೆ | ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಲು ಅನಿಲ್ ವಿಜ್ ಸಜ್ಜು
ಅನಿಲ್ ವಿಜ್ ಸಜ್ಜು | PC : PTI
ಚಂಡಿಗಡ : ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಅಧಿಕಾರಕ್ಕೆ ಮರಳಿದರೆ ಮುಖ್ಯಮಂತ್ರಿ ಹುದ್ದೆಗೆ ತಾನು ಹಕ್ಕು ಮಂಡಿಸುವುದಾಗಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಅನಿಲ್ ವಿಜ್ ಅವರು ರವಿವಾರ ಘೋಷಿಸಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದರೆ ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರೇ ಮತ್ತೆ ಸಿಎಂ ಆಗುತ್ತಾರೆ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿರುವಾಗ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಜ್ ಹೇಳಿಕೆಯು ಹೊರಬಿದ್ದಿದೆ. ಸೈನಿ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿದ್ದಾರೆ.
‘ನಾನು ಈವರೆಗೆ ಪಕ್ಷದಿಂದ ಏನನ್ನೂ ಕೋರಿಲ್ಲ. ಹರ್ಯಾಣದ ಜನರು ನನ್ನನ್ನು ಭೇಟಿಯಾಗಿ ನೀವು ಅತ್ಯಂತ ಹಿರಿಯರಾಗಿದ್ದರೂ ಮುಖ್ಯಮಂತ್ರಿ ಏಕಾಗಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಜನತೆಯ ಬೇಡಿಕೆ ಮತ್ತು ನನ್ನ ಜ್ಯೇಷ್ಠತೆಯ ಆಧಾರದಲ್ಲಿ ಈ ಬಾರಿ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಲಿದ್ದೇನೆ. ಪಕ್ಷವು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೋ ಇಲ್ಲವೋ ಎನ್ನುವುದು ಅದಕ್ಕೆ ಬಿಟ್ಟಿದ್ದು. ಆದರೆ ನನ್ನನ್ನು ಮುಖ್ಯಮಂತ್ರಿಯಾಗಿಸಿದರೆ ಹರ್ಯಾಣದ ಹಣೆಬರಹ ಮತ್ತು ಚಿತ್ರಣವನ್ನು ನಾನು ಬದಲಿಸುತ್ತೇನೆ’ ಎಂದು ವಿಜ್ ಹೇಳಿದರು.
90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಅ.5ರಂದು ಮತದಾನ ನಡೆಯಲಿದ್ದು, ಅ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.