ಹರ್ಯಾಣ ಹಿಂಸಾಚಾರ ಪ್ರಕರಣ: ಕಾಂಗ್ರೆಸ್ ಶಾಸಕ ಮಾಮನ್ ಖಾನ್ಗೆ ಜಾಮೀನು
Photo : twitter
ಚಂಡಿಗಢ: ನೂಹ್ನಲ್ಲಿ ಜುಲೈ 31ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ಮಾಮನ್ ಖಾನ್ಗೆ ಹರ್ಯಾಣದ ನೂಹ್ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿ ಮಾಮನ್ ಖಾನ್ ಅವರು ಸೆಪ್ಟಂಬರ್ 15ರಂದು ಬಂಧಿತರಾಗಿದ್ದರು. ಅಕ್ಟೋಬರ್ 3ರಂದು ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ನಾಗಿನಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಎರಡು ಪ್ರಕರಣಗಳಲ್ಲಿ ನ್ಯಾಯಾಲಯ ಮಾಮನ್ ಖಾನ್ಗೆ ಅಕ್ಟೋಬರ್ 18ರ ವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಅನಂತರ ನ್ಯಾಯಾಲಯ ಬುಧವಾರ ಅವರಿಗೆ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಿರೋಝ್ಪುರ ಝಿರ್ಕಾ ಶಾಸಕರಾಗಿರುವ ಮಾಮನ್ ಖಾನ್ ವಿರುದ್ಧ ನಾಲ್ಕು ಎಫ್ಐಆರ್ ಗಳು ದಾಖಲಾಗಿವೆ. ಅವರಿಗೆ ಇತರ ಪ್ರಕರಣಗಳಲ್ಲಿ ಈ ಹಿಂದೆ ಇಲ್ಲಿನ ಇನ್ನೊಂದು ನ್ಯಾಯಾಲಯ ಜಾಮೀನು ನೀಡಿತ್ತು ಎಂದು ಅವರ ನ್ಯಾಯವಾದಿ ತಾಹಿರ್ ಹುಸೈನ್ ದೇವ್ಲಾ ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಹಾಗೂ ಸತ್ಯ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಶರ್ಮಾ ಅವರು ಬುಧವಾರ ಪ್ರಕರಣದ ವಿಚಾರಣೆ ನಡೆಸಿದರು. ಅನಂತರ ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಿದರು ಎಂದು ದೇವ್ಲ ತಿಳಿಸಿದ್ದಾರೆ.
ವಿಶ್ವಹಿಂದೂ ಪರಿಷತ್ ನೇತೃತ್ವದ ಧಾರ್ಮಿಕ ಮೆರವಣಿಗೆ ಮೇಲೆ ನೂಹ್ನಲ್ಲಿ ಜುಲೈ 31ರಂದು ದಾಳಿ ನಡೆದಿತ್ತು. ಇದರಿಂದ ವ್ಯಾಪಕ ಕೋಮು ಹಿಂಸಾಚಾರ ಭುಗಿಲೆದ್ದು 6 ಮಂದಿ ಮೃತಪಟ್ಟಿದ್ದರು.