ಹರ್ಯಾಣ | ರೈಲು ಹಳಿಗಳಲ್ಲಿ ಧರಣಿ ನಿಲ್ಲಿಸಿದ ರೈತರು
ಬಿಜೆಪಿ ನಾಯಕರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ನಿರ್ಧಾರ
PC : NDTV
ಚಂಡಿಗಢ : ಪಂಜಾಬ್ ಹಾಗೂ ಹರಿಯಾಣ ಗಡಿಯ ಸಮೀಪ ರೈಲು ಹಳಿಗಳಲ್ಲಿ ನಡೆಸುತ್ತಿರುವ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುವುದು ಎಂದು ರೈತರು ಸೋಮವಾರ ಘೋಷಿಸಿದ್ದಾರೆ.
ಇದರ ಬದಲು ಹರ್ಯಾಣದ ಬಿಜೆಪಿ ನಾಯಕರ ನಿವಾಸದ ಎದುರು ಧರಣಿ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ರೈತರು ಹೇಳಿದ್ದಾರೆ.
ನಾವು ಶಂಭು ರೈಲು ನಿಲ್ದಾಣದ ರೈಲು ಹಳಿಯಲ್ಲಿ ನಡೆಸುತ್ತಿದ್ದ ದರಣಿಯನ್ನು ಸೋಮವಾರ ಸಂಜೆ ಅಂತ್ಯಗೊಳಿಸಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಅಥವಾ ಎಸ್ಕೆಎಂ ಹೇಳಿದೆ. ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಹಾಗೂ ಎಸ್ಕೆಎಂನ ನೇತೃತ್ವದಲ್ಲಿ ರೈತರು ಇಲ್ಲಿನ ರೈಲು ಹಳಿಗಳಲ್ಲಿ ಎಪ್ರಿಲ್ 17ರಿಂದ ಧರಣಿ ನಡೆಸುತ್ತಿದ್ದರು.
ಚಳವಳಿಗೆ 100 ದಿನಗಳು ತುಂಬಿದ ಹಿನ್ನೆಲೆಯಲ್ಲಿ ಮೇ 22ರಂದು ಶಂಭು ಗಡಿಗೆ ಪ್ರತಿಭಟನಾ ರ್ಯಾಲಿಗೆ ಕೂಡ ರೈತರು ಕರೆ ನೀಡಿದ್ದಾರೆ.
ರೈತರ ಗುಂಪುಗಳ ವಿರುದ್ಧ ಬಿಜೆಪಿ ನಾಯಕರು ಸುಳ್ಳು ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ಫರೀದ್ಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್ ಹಾಗೂ ಲುಧಿಯಾನದ ಅಭ್ಯರ್ಥಿ ರವನೀತ್ ಸಿಂಗ್ ಬಿಟ್ಟು ನಮಗೆ ಬೆದರಿಕೆ ಒಡ್ಡಿದ್ದಾರೆ. ಬಿಜೆಪಿ ನಾಯಕರ ನಿವಾಸದ ಮುಂದೆ ಎಷ್ಟು ದಿನಗಳ ಕಾಲ ಧರಣಿ ನಡೆಸುವುದು ಎಂಬ ಬಗ್ಗೆ ರೈತರು ಮೇ 22ರಂದು ನಿರ್ಧರಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರು ಹೇಳಿದ್ದಾರೆ.
34 ದಿನಗಳ ದೀರ್ಘ ಕಾಲದ ಧರಣಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದ ಬಳಿಕ ರೈತರು ರೈಲು ಹಳಿಯಲ್ಲಿ ಕೇಕ್ ಕತ್ತರಿಸುವುದು ಕಂಡು ಬಂತು.
ರೈತರ ಈ ಪ್ರತಿಭಟನೆಯಿಂದ ದಿಲ್ಲಿ-ಜಮ್ಮು ರೈಲು ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು ಅಥವಾ ಪಥ ಬದಲಾಯಿಸಲಾಗಿತ್ತು. ಹಲವು ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿತ್ತು.