ಹರ್ಯಾಣ: ಇಟ್ಟಿಗೆ ಗೂಡಿನ ಗೋಡೆ ಕುಸಿದು ನಾಲ್ವರು ಮಕ್ಕಳು ಮೃತ್ಯು
PC : NDTV
ಹಿಸಾರ್: ನಿದ್ರಿಸುತ್ತಿದ್ದ ನಾಲ್ವರು ಮಕ್ಕಳ ಮೇಲೆ ಇಟ್ಟಿಗೆ ಗೂಡಿನ ಗೋಡೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ರವಿವಾರ ರಾತ್ರಿ ಹರ್ಯಾಣದ ಹಿಸಾರ್ ಜಿಲ್ಲೆಯ ಬುಡಾನಾ ಗ್ರಾಮದಲ್ಲಿ ಸಂಭವಿಸಿದೆ. ಐದರ ಹರೆಯದ ಬಾಲಕಿಯೋರ್ವಳು ಗಂಭೀರವಾಗಿ ಗಾಯಗೊಂಡಿದ್ದು, ಹಿಸಾರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಐವರು ಮಕ್ಕಳು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಬಧಾವ್ ಗ್ರಾಮದವರಾಗಿದ್ದಾರೆ.
ಮೃತ ಮಕ್ಕಳನ್ನು ನಿಶಾ(3 ತಿಂಗಳು),ಸೂರಜ್(9), ನಂದಿನಿ(5) ಮತ್ತು ವಿವೇಕ(9) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಹಲವಾರು ಕಾರ್ಮಿಕ ಕುಟುಂಬಗಳು ಇಟ್ಟಿಗೆ ಗೂಡಿನಲ್ಲಿ ದುಡಿಯುತ್ತಿದ್ದು, ಸಮೀಪದ ಚಿಮಣಿಯ ಬಳಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು.
ಮಕ್ಕಳು ಮತ್ತು ಕೆಲವು ಕಾರ್ಮಿಕರು ಮಲಗಿದ್ದಾಗ ಗೋಡೆ ಕುಸಿದು ಬಿದ್ದಿದ್ದು, ಮೂವರು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮೂರು ತಿಂಗಳ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಈ ಬಗ್ಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ, ದೂರು ಬಂದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪೋಲಿಸರು ತಿಳಿಸಿದ್ದಾರೆ.