ಹರ್ಯಾಣ: ವಿಷಪೂರಿತ ಮದ್ಯ ದುರಂತ; ಮೃತರ ಸಂಖ್ಯೆ 18ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ | ಫೋಟೋ: PTI
ಚಂಡಿಗಢ: ಹರ್ಯಾಣದಲ್ಲಿ ವಿಷಪೂರಿತ ಮದ್ಯಸೇವಿಸಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಷಪೂರಿತ ಮದ್ಯ ಸೇವಿಸಿ ಯಮುನಾನಗರ್ ಹಾಗೂ ನೆರೆಯ ಅಂಬಾಲಾ ಜಿಲ್ಲೆಯ ಮಂದೇಬರಿ, ಪಂಜೆಟೊ ಕಾ ಮಾಜ್ರಾ, ಫೂಸ್ಗಢ ಹಾಗೂ ಸರನ್ ಗ್ರಾಮಗಳಲ್ಲಿ ಸಾವು ಸಂಭವಿಸಿದೆ ಎಂದು ಯಮುನಾನಗರ್ ಪೊಲೀಸ್ ಅಧೀಕ್ಷಕ ಗಂಗಾ ರಾಮ್ ಪುನಿಯಾ ಹೇಳಿದ್ದಾರೆ.
ಪ್ರಕರಣದಲ್ಲಿ ಮೊದಲ ಸಾವು ಬುಧವಾರ ವರದಿಯಾಯಿತು. ಬುಧವಾರ ಅಪರಾಹ್ನ ವಿಷಪೂರಿತ ಮದ್ಯ ಸೇವಿಸಿ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ನಾವು ಮಾಹಿತಿ ಸ್ವೀಕರಿಸಿದೆವು. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು ಹಾಗೂ ತನಿಖೆ ಆರಂಭಿಸಿತು ಎಂದು ಅವರು ತಿಳಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಯಮುನಾನಗರ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವನ್ನಪ್ಪಿರುವುದು ವರದಿಯಾಗಿದ್ದು, ಇದಕ್ಕಿಂತ ಮೊದಲು 10 ಮಂದಿ ಮೃತಪಟ್ಟಿದ್ದಾರೆ. ಅಂಬಾಲದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸರು ಇದುವರೆಗೆ 7 ಮಂದಿ ಶಂಕಿತರನ್ನು ಬಂಧಿಸಿದ್ದಾರೆ ಹಾಗೂ ಇತರ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಇಲ್ಲಿನ ಪರಿತ್ಯಕ್ತ ಕಾರ್ಖಾನೆಯೊಂದರಿಂದ 200 ಕ್ರೇಟ್ಸ್ ವಿಷಪೂರಿತ ಮದ್ಯ ವಶಪಡಿಸಿಕೊಂಡಿದ್ದಾರೆ. ಅಲ್ಲದೆ 14 ಖಾಲಿ ಡ್ರಮ್ ಗಳು ಹಾಗೂ ಅಕ್ರಮ ಮಧ್ಯ ತಯಾರಿಸಲು ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 308, 302 ಹಾಗೂ 120ಬಿ ಹಾಗೂ ಪಂಜಾಬ್ ಅಬಕಾರಿ ಕಾಯ್ದೆ, ಹಕ್ಕುಸ್ವಾಮ್ಯ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುನಿಯಾ ತಿಳಿಸಿದ್ದಾರೆ.