ಹರ್ಯಾಣ: ಐಎನ್‌ಎಲ್‌ಡಿ ಮುಖ್ಯಸ್ಥನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಚಂಡೀಗಢ: ಹರ್ಯಾಣ ಐಎನ್‌ಎಲ್‌ಡಿ ಮುಖ್ಯಸ್ಥ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಝಜ್ಜರ್ ಜಿಲ್ಲೆಯ ಬಹದ್ದೂರ್‌ಗಢದಲ್ಲಿ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಹಾರಿಸಿದ ಗುಂಡಿಗೆ ಮಾಜಿ ಶಾಸಕ ನಫೆ ಸಿಂಗ್ ರಾಠಿ ಬಲಿಯಾಗಿದ್ದಾರೆ ಎಂಬ ಸಂಗತಿಯನ್ನು ಐಎನ್‌ಎಲ್‌ಡಿ ವಕ್ತಾರ ರಾಕೇಶ್ ಸಿಹಾಗ್ ದೃಢಪಡಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡ ರಾಠಿಯವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಗುಂಡಿನ ದಾಳಿಯಲ್ಲಿ ರಾಠಿಯವರ ಮೂವರು ಖಾಸಗಿ ಅಂಗರಕ್ಷಕರೂ ಗಾಯಗೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ ಗುಂಡಿನ ದಾಳಿಯಲ್ಲಿ ಪಕ್ಷದ ಓರ್ವ ಕಾರ್ಯಕರ್ತ ಕೂಡಾ ಮೃತಪಟ್ಟಿದ್ದಾನೆ ಎಂದು ರಾಕೇಶ್ ಸಿಹಾಗ್ ತಿಳಿಸಿದ್ದಾರೆ.
ಬಹದ್ದೂರ್‌ಗಢ ವಿಧಾನಸಭಾ ಕ್ಷೇತ್ರದಿಂದ 1996 ಹಾಗೂ 2005ರಲ್ಲಿ ಎರಡು ಬಾರಿ ಶಾಸಕರಾಗಿ ರಾಠಿ ಆಯ್ಕೆಯಾಗಿದ್ದರು.
ನಫೆ ಸಿಂಗ್ ರಾಠಿ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ, "ಈ ಘಟನೆಯು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗೆ ನಿದರ್ಶನವಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.