ಹರ್ಯಾಣ ಭೂ ವ್ಯವಹಾರ ಪ್ರಕರಣ; ರಾಬರ್ಟ್ ವಾದ್ರಾ ವಿಚಾರಣೆ ನಡೆಸಿದ ಈಡಿ

ರಾಬರ್ಟ್ ವಾದ್ರಾ | PC : PTI
ಹೊಸದಿಲ್ಲಿ: ಹರ್ಯಾಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ಹಾಗೂ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ವಿಚಾರಣೆ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯ ತನಗೆ ಸಮನ್ಸ್ ನೀಡಿರುವುದನ್ನು ರಾಜಕೀಯ ದ್ವೇಷ ಎಂದು ಪ್ರತಿಪಾದಿಸಿರುವ ವಾದ್ರಾ, ಈ ಹಿಂದೆ ಜಾರಿ ನಿರ್ದೇಶನಾಲಯ ತನ್ನನ್ನು ಹಲವು ಗಂಟೆಗಳ ಕಾಲ ಪ್ರಶ್ನಿಸಿತ್ತು. ನಾನು ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ನೀಡಿದ್ದೆ. ಈಗ ಮತ್ತೆ ನನ್ನ ವಿರುದ್ಧ ಅದೇ ಪ್ರಕರಣವನ್ನು ಕೆದಕುತ್ತಿದೆ ಎಂದಿದ್ದಾರೆ.
56 ವರ್ಷದ ವಾದ್ರಾ ಸೆಂಟ್ರಲ್ ದಿಲ್ಲಿಯ ಸುಜನ್ ಸಿಂಗ್ ಪಾರ್ಕ್ನಲ್ಲಿರುವ ತನ್ನ ನಿವಾಸದಿಂದ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಗೆ ಎರಡು ಕಿ.ಮೀ. ನಡೆದುಕೊಂಡು ಹೋದರು.
ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳುವ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ದ್ವೇಷವಲ್ಲದೆ, ಬೇರೇನೂ ಅಲ್ಲ. ನಾನು ಯಾವಾಗೆಲ್ಲ ಅಲ್ಪಸಂಖ್ಯಾತರ ಪರವಾಗಿ ಮಾತನಾಡುತ್ತೇನೆಯೋ, ಆಗ ತನ್ನನ್ನು ತಡೆಯಲು ಅವರು ಪ್ರಯತ್ನಿಸುತ್ತಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡುವುದನ್ನು ತಡೆಯಲು ಕೂಡ ಅವರು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾನು ಹಿಂದಿನಂತೆ ಅವರಿಗೆ ಸಹಕರಿಸಲಿದ್ದೇನೆ ಎಂದು ವಾದ್ರಾ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ವಾದ್ರಾ ಅವರಿಗೆ ಮೊದಲು ಎಪ್ರಿಲ್ 8ರಂದು ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಹಾಜರಾಗಿರಲಿಲ್ಲ. ಅವರು ಹೊಸ ದಿನಾಂಕ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.
ವಾದ್ರಾ ಅವರಿಗೆ ನಂಟು ಹೊಂದಿದೆ ಕಂಪೆನಿ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಓಂಕಾರೇಶ್ವರ ಪ್ರಾಪರ್ಟಿಸ್ನಿಂದ ಗುರುಗ್ರಾಮದ ಶಿಕೋಪುರದಲ್ಲಿ 7.5 ಕೋ.ರೂ.ಗೆ 3.5 ಎಕರೆ ಭೂಮಿಯನ್ನು 2008ರಲ್ಲಿ ಖರೀದಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಭೂ ವ್ಯವಹಾರಕ್ಕೆ ಸಂಬಂಧಿಸಿ ಹರ್ಯಾಣ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿದ್ದರು.