ಉಕ್ರೇನ್ ವಿರುದ್ಧ ಹೋರಾಡಲು ರಶ್ಯ ಸೇನೆ ಕಳುಹಿಸಿದ್ದ ಹರ್ಯಾಣದ ಯುವಕ ಸಾವು
ರವಿ ಮೌನ್ | PC : NDTV
ಚಂಡಿಗಢ: ಉಕ್ರೇನ್ ಪಡೆಗಳ ವಿರುದ್ಧ ಮುಂಚೂಣಿಯಲ್ಲಿ ಹೋರಾಡಲು ರಶ್ಯಾ ಸೇನೆ ಕಳುಹಿಸಿದ್ದ ಹರ್ಯಾಣದ 22 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬ ಸೋಮವಾರ ಹೇಳಿದೆ.
ಹರ್ಯಾಣದ ಕೈಥಲ್ ಜಿಲ್ಲೆಯ ಮಾಟೌರ್ ಗ್ರಾಮದ ರವಿ ಮೌನ್ ಅವರು ಮೃತಪಟ್ಟಿರುವುದನ್ನು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ದೃಢಪಡಿಸಿದೆ ಎಂದು ಆತನ ಸಹೋದರ ಅಜಯ್ ಮೌನ್ ತಿಳಿಸಿದ್ದಾರೆ.
ಸಾರಿಗೆ ಕೆಲಸಕ್ಕೆ ನೇಮಕನಾದ ಬಳಿಕ ರವಿ ಮೌನ್ ಜನವರಿ 13ರಂದು ರಶ್ಯಕ್ಕೆ ತೆರಳಿದ್ದ. ಆದರೆ, ಆತನನ್ನು ಸೇನೆಗೆ ನಿಯೋಜಿಸಲಾಗಿತ್ತು ಎಂದು ಅಜಯ್ ಮೌನ್ ಹೇಳಿದ್ದಾರೆ.
ತನ್ನ ಸಹೋದರ ಕುರಿತು ಮಾಹಿತಿ ನೀಡುವಂತೆ ಅಜಯ್ ಮೌನ್ ಜುಲೈ 21ರಂದು ಭಾರತದ ರಾಯಭಾರ ಕಚೇರಿಗೆ ಪತ್ರ ಬರೆದಿದ್ದರು. ‘‘ಆದರೆ, ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿತು’’ ಎಂದು ಅವರು ಹೇಳಿದ್ದಾರೆ.
ಮೃತದೇಹವನ್ನು ಗುರುತಿಸಲು ತಮ್ಮ ಡಿಎನ್ಎ ಪರೀಕ್ಷೆಯ ವರದಿ ಕಳುಹಿಸಿಕೊಡುವಂತೆ ಭಾರತದ ರಾಯಭಾರ ಕಚೇರಿ ನಮಗೆ ಸೂಚಿಸಿದೆ ಎಂದು ಕುಟುಂಬ ಹೇಳಿದೆ.
‘‘ರವಿ ಮೌನ್ ಜನವರಿ 13ರಂದು ರಶ್ಯಕ್ಕೆ ತೆರಳಿದ್ದರು. ಏಜೆಂಟ್ ಓರ್ವ ಆತನನ್ನು ಸಾರಿಗೆ ಕೆಲಸಕ್ಕೆ ರಶ್ಯಕ್ಕೆ ಕಳುಹಿಸಿದ್ದ. ಆದರೆ, ಆತನನ್ನು ರಶ್ಯ ಸೇನೆಗೆ ನಿಯೋಜಿಸಲಾಗಿತ್ತು’’ ಎಂದು ಅಜಯ್ ಮೌನ್ ತಿಳಿಸಿದ್ದಾರೆ.
ಸೇನೆಯಲ್ಲಿರುವ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಹಾಗೂ ಹಿಂದೆ ಕಳುಹಿಸುವಂತೆ ಭಾರತದ ಬೇಡಿಕೆಗೆ ರಶ್ಯ ಒಪ್ಪಿಕೊಂಡ ಕೆಲವು ದಿನಗಳ ಬಳಿಕ ಕುಟುಂಬ ಈ ಪ್ರತಿಪಾದನೆ ಮಾಡಿದೆ.
ಉಕ್ರೇನ್ ಸೇನಾ ಪಡೆಗಳ ವಿರುದ್ಧ ಮುಂಚೂಣಿಯಲ್ಲಿ ಹೋರಾಡುವಂತೆ ಅಥವಾ 10 ವರ್ಷಗಳ ಜೈಲುವಾಸ ಅನುಭವಿಸುವಂತೆ ರಶ್ಯ ಸೇನೆ ತನ್ನ ಸಹೋದರನಿಗೆ ತಿಳಿಸಿತ್ತು ಎಂದು ಅಜಯ್ ಮೌನ್ ಆರೋಪಿಸಿದ್ದಾರೆ.