ಹರ್ಯಾಣ| ವಲಸೆ ಕಾರ್ಮಿಕರ ಗುಡಿಸಲು ನೆಲಸಮ: ಆಡಳಿತಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ ಸಾಕೇತ್ ಗೋಖಲೆ
Saket Gokhale .| Photo: Facebook
ಕೋಲ್ಕತಾ: ಹರ್ಯಾಣದ ನೂಹ್ ನಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಗುಡಿಸಲುಗಳನ್ನು ಆಡಳಿತ ಬುಲ್ಡೋಜರ್ ಬಳಸಿ ನೆಲಸಮಗೊಳಿಸಿರುವುದನ್ನು ಟಿಎಂಸಿ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಾಕೇತ್ ಗೋಖಲೆ ರವಿವಾರ ಪ್ರಶ್ನಿಸಿದ್ದಾರೆ. ಅವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಹಾಗೂ ಉಪ ವಿಭಾಗೀಯ ದಂಡಾಧಿಕಾರಿ ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ. ಕರ್ಫ್ಯೂ ಜಾರಿಯಲ್ಲಿರುವ ಸಂದರ್ಭ ಈ ಗುಡಿಸಲುಗಳನ್ನು ನೆಲಸಮ ಮಾಡಿರುವುದು ಯಾಕೆ ? ಇತ್ತೀಚೆಗೆ ನಡೆದ ಹಿಂಸಾಚಾರದ ಬಳಿಕ ಈ ಗುಡಿಸಲುಗಳು ಅತಿಕ್ರಮಣ ಎಂದು ಸರಕಾರಕ್ಕೆ ಹೇಗೆ ಗೊತ್ತಾಯಿತು? ಕಾನೂನು ಪ್ರಕಾರ ಅವರಿಗೆ ಯಾವುದಾದರೂ ನೋಟಿಸ್ ಗಳನ್ನು ನೀಡಲಾಗಿದೆಯೇ? ಎಂದು ಗೋಖಲೆ ಪ್ರಶ್ನಿಸಿದ್ದಾರೆ.
ಈ ಗುಡಿಸಲುಗಳಲ್ಲಿ ವಾಸಿಸುವ ಜನರು ಅಕ್ರಮ ವಲಸಿಗರು ಎಂದಾದರೆ, ನೂಹ್ ನ ಉಪ ವಿಭಾಗೀಯ ದಂಡಾಧಿಕಾರಿ ಅದನ್ನು ಹೇಗೆ ಗುರುತಿಸಿದರು ಹಾಗೂ ನಿರ್ಧರಿಸಿದರು? 1967ರ ಪಾಸ್ಪೋರ್ಟ್ ಕಾಯ್ದೆ ಅಡಿಯಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.
‘‘ಈ ಹಿಂಸಾಚಾರದಲ್ಲಿ ಪಾಲ್ಗೊಂಡ ಹಾಗೂ ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಕೊಂಡೊಯ್ದ ಎಷ್ಟು ಮಂದಿ ವಿಶ್ವಹಿಂದೂ ಪರಿಷತ್ ಗೂಂಡಾಗಳು ಹಾಗೂ ಇತರರ ಮನೆಗಳನ್ನು ಗುರುತಿಸಲಾಗಿದೆ ಹಾಗೂ ನೆಲಸಮಗೊಳಿಸಲಾಗಿದೆ’’ ಎಂದು ಅವರು ಪ್ರಶ್ನಿಸಿದ್ದಾರೆ.
ಕೋಮು ಗಲಭೆಯಲ್ಲಿ ಭಾಗಿಯಾಗಿರುವ ವಿಶ್ವಹಿಂದೂ ಪರಿಷತ್ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ ? ಎಂಬ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತುರ್ತು ಸ್ಪಷ್ಟನೆ ನೀಡಬೇಕು ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.