ಕೋಚ್ ಜತೆಗಿನ ಸಂಬಂಧ ವಿಚಾರದಲ್ಲಿ ಹರ್ಯಾಣ ಸಚಿವ ಪ್ರಾಮಾಣಿಕ ಅಲ್ಲ: ಪೊಲೀಸರ ಹೇಳಿಕೆ

ಚಂಡೀಗಢ: ಹರ್ಯಾಣ ಸಚಿವ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಅವರ ವಿರುದ್ಧ ಜೂನಿಯರ್ ಅಥ್ಲೆಟಿಕ್ ಕೋಚ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು 700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇಬ್ಬರ ನಡುವಿನ ಸಂಬಂಧ ವೃತ್ತಿಪರ ಸಂವಾದವನ್ನು ಮೀರಿ ಬೆಳೆದಿದ್ದು, ಆರೋಪಿ ಸಚಿವರು ಈ ವಿಚಾರದಲ್ಲಿ ಪ್ರಾಮಾಣಿಕರಲ್ಲ ಎಂದು ಆರೋಪಪಟ್ಟಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆರೋಪಪಟ್ಟಿಯಲ್ಲಿ 45 ಸಾಕ್ಷಿಗಳನ್ನು ಹೆಸರಿಸಲಾಗಿದ್ದು, ಈ ಪೈಕಿ ಬಹುತೇಕ ಮಂದಿ, ಸಚಿವರ ವಿರುದ್ಧ ಜೂನಿಯರ್ ಕೋಚ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಪೂರಕ ಹೇಳಿಕೆ ನೀಡಿದ್ದಾರೆ. ತಡರಾತ್ರಿಯಲ್ಲಿ ಸೇರಿದಂತೆ ಅಧಿಕೃತ ಕೆಲಸದ ಅವಧಿಯನ್ನು ಮೀರಿ ಕೋಚ್ ಅವರನ್ನು ಏಕೆ ಭೇಟಿಯಾಗಿದ್ದರು ಎನ್ನುವುದಕ್ಕೆ ಸಚಿವರು ವಿವರಣೆ ನೀಡಿಲ್ಲ ಎಂದು ವಿವರಿಸಲಾಗಿದೆ.
ಆರೋಪಪಟ್ಟಿಯಲ್ಲಿರುವ ಕೆಲ ಅಂಶಗಳು, ಜೂನಿಯರ್ ಕೋಚ್ ಅವರ ಮೊಬೈಲ್ ಫೋನ್ ಪರೀಕ್ಷೆಗೆ ಒಳಪಡಿಸಿದ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿದೆ. ಪೊಲೀಸರು ಸಚಿವರ ಎರಡು ಫೋನ್ ಹಾಗೂ ಆರೋಪ ಮಾಡಿದ ಕೋಚ್ ನ ಫೋನ್ ಗಳನ್ನು ವಿಶ್ಲೇಷಣೆಗಾಗಿ ಕಳುಹಿಸಿದ್ದರು. ಸಚಿವರು ಹೇಳಿಕೆ ನೀಡಿರುವಂತೆ ಆರೋಪ ಮಾಡಿದ ಕೋಚ್ ಅವರೇ ತಮ್ಮ ಅಧಿಕೃತ ಕ್ಯಾಬಿನ್ ಗೆ ಭೇಟಿ ನೀಡಿದ್ದಾರೆ ಎಂದು ಆರೋಪಪಟ್ಟಿ ಉಲ್ಲೇಖಿಸಿದೆ. ಇನ್ನೊಂದೆಡೆ ಆರೋಪ ಮಾಡಿದ ಮಹಿಳೆ, ಸಚಿವರ ಮನೆಯ ಮುಖ್ಯ ಕಚೇರಿ, ಪಕ್ಕದ ಕೊಠಡಿ, ಬೆಡ್ ರೂಂ ಹಾಗೂ ಹೊಂದಿಕೊಂಡಿರುವ ಬಾತ್ ರೂಂ ಎಲ್ಲವನ್ನೂ ಗುರುತಿಸಿದ್ದು, ಈ ಎಲ್ಲವನ್ನೂ ಸಂಪರ್ಕಿಸುವ ಪ್ಯಾಸೇಜ್ ಇರುವುದನ್ನು ದೃಢಪಡಿಸಿದ್ದಾರೆ ಎಂದು ಹೇಳಲಾಗಿದೆ.