ಹರ್ಯಾಣ | ಇಬ್ಬರು ಉಪ ಮುಖ್ಯಮಂತ್ರಿಗಳೊಂದಿಗೆ ಮತ್ತೆ ಮುಖ್ಯಮಂತ್ರಿ ಗಾದಿಗೇರಲಿರುವ ನಯಾಬ್ ಸಿಂಗ್ ಸೈನಿ: ವರದಿ
ನಯಾಬ್ ಸಿಂಗ್ ಸೈನಿ | PC : PTI
ಚಂಡೀಗಢ: ಸತತ ಮೂರನೆಯ ಬಾರಿ ಹರ್ಯಾಣದಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿಯಲ್ಲಿ ಸರಕಾರದ ರಚನೆ, ಸಚಿವ ಸಂಪುಟದ ಕುರಿತು ಚರ್ಚೆಗಳು ಗರಿಗೆದರಿವೆ. ವರದಿಗಳ ಪ್ರಕಾರ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಇಬ್ಬರು ಉಪ ಮುಖ್ಯಮಂತ್ರಿಗಳೊಂದಿಗೆ ಮತ್ತೆ ಮುಖ್ಯಮಂತ್ರಿ ಗಾದಿಗೇರಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಒಂದು ಸಾಮಾನ್ಯ ಸಂಗತಿಯಾಗಿ ಬದಲಾಗಿದೆ. ಕಳೆದ ವರ್ಷದಿಂದ ನಡೆದಿರುವ ಒಂಬತ್ತು ರಾಜ್ಯಗಳ ಚುನಾವಣೆಯ ಪೈಕಿ ಏಳು ರಾಜ್ಯಗಳಲ್ಲಿ ಉಪ ಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಉಪ ಮುಖ್ಯಮಂತ್ರಿ ನೇಮಕವಾಗಿರುವ ರಾಜ್ಯಗಳ ಪೈಕಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮೇಘಾಲಯ, ತೆಲಂಗಾಣ ಹಾಗೂ ನಾಗಾಲ್ಯಾಂಡ್ ರಾಜ್ಯಗಳು ಸೇರಿವೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಉದಯನಿಧಿ ಸ್ಟಾಲಿನ್ ರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಬೆಳೆಯುತ್ತಿರುವ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಪ್ರವೃತ್ತಿಗೆ ತಾಜಾ ನಿದರ್ಶನವಾಗಿದೆ.