ಹರ್ಯಾಣ | ಗಂಭೀರ ಸ್ವರೂಪ ತಳೆಯುತ್ತಿರುವ ಮರ್ಯಾದಾ ಹತ್ಯೆ ; ಸರಣಿ ಪ್ರಕರಣಗಳು ಬೆಳಕಿಗೆ
ಸಾಂದರ್ಭಿಕ ಚಿತ್ರ | PC : ANI
ಜಿಂದ್: ಮೂರು ಸರಣಿ ಮರ್ಯಾದಾ ಹತ್ಯೆ ನಡೆಯುವ ಮೂಲಕ ಹರ್ಯಾಣ ರಾಜ್ಯ ತತ್ತರಿಸಿ ಹೋಗಿದೆ. ಈ ಘಟನೆಗಳು ಹರ್ಯಾಣ ರಾಜ್ಯದಲ್ಲಿ ಇಂತಹ ಅಪರಾಧಗಳು ಎಂತಹ ಗಂಭೀರ ಸ್ವರೂಪ ತಳೆದಿವೆ ಎಂಬುದಕ್ಕೆ ಸಾಕ್ಷಿಯಾಗಿವೆ.
ಇತ್ತೀಚಿನ ಘಟನೆಯಲ್ಲಿ ತನ್ನ ಹಿರಿಯ ಸಹೋದರಿಯು ಕೈತಾಲ್ ಜಿಲ್ಲೆಯ ಪರಿಶಿಷ್ಟ ಜಾತಿಯ ಯುವಕನೊಬ್ಬನನ್ನು ವರಿಸಿದ್ದರಿಂದ ಆಕ್ರೋಶಿತನಾದ ಗುರ್ಜರ್ ಸಮುದಾಯದ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಸಹೋದರಿಯನ್ನೇ ಹತ್ಯೆಗೈದಿದ್ದಾನೆ.
ತನ್ನ ಸಹೋದರಿ ಕೋಮಲ್ (20) ಕುತ್ತಿಗೆಗೆ ಗುಂಡು ಹೊಡೆದು ಹತ್ಯೆಗೈದಿರುವ ಆ ಅಪ್ರಾಪ್ತ ಬಾಲಕ, ಇದರೊಂದಿಗೆ ತನ್ನ ಸಹೋದರಿಯ ಅತ್ತೆ ಕಾಂತಾ ಹಾಗೂ ಆಕೆಯ ನಾದಿನಿ ಅಂಜಲಿಗೂ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ಕೃತ್ಯ ಎಸಗಿರುವ ಬಾಲಕನನ್ನು ಬಾಲಾಪರಾಧ ಕಾರಾಗೃಹಕ್ಕೆ ರವಾನಿಸಲಾಗಿದ್ದರೆ, ಈ ಕೃತ್ಯದ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಲಾಗಿರುವ ಆತನ ತಾಯಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡನೆ ಘಟನೆಯು ಜೂನ್ 3ರಂದೇ ನಡೆದಿದ್ದರೂ, ತಮ್ಮ ಗ್ರಾಮದ ಸಮೀಪದ ಗ್ರಾಮದ ಯುವಕನನ್ನು ಪ್ರೀತಿಸಿದ್ದ ಸಿರ್ಸಾದಲ್ಲಿನ ನೇಜಡೇಲಾ ಕಲನ್ ಗ್ರಾಮದ 27 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದ ಆಕೆಯ ಕುಪಿತ ತಂದೆ ಹಾಗೂ ಸಹೋದರನ ವಿರುದ್ಧ ಜೂನ್ 18ರಂದು ಪೊಲೀಸರು ಕ್ರಮ ಕೈಗೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆ ಹಾಗೂ ಆಕೆ ಪ್ರೀತಿಸುತ್ತಿದ್ದ ಯುವಕನಿಬ್ಬರೂ ಒಂದೇ ಜಾತಿ(ಕಾಂಬೋಜ್)ಗೆ ಸೇರಿದ್ದರೂ, ಅವರಿಬ್ಬರ ಪ್ರೇಮವನ್ನು ಸಹಿಸದ ಸರವ್ಜೀತ್ ಕೌರ್ ತಂದೆ ಹಾಗೂ ಸಹೋದರನು, ಆಕೆಯ ಕತ್ತು ಹಿಸುಕಿ ಕೊಂದು, ನಂತರ ಹೃದಯಾಘಾತದ ಕತೆ ಕಟ್ಟಿದ್ದರು.
ಇದಾದ ನಂತರ, ನ್ಯಾಯಾಂಗ ಬಂಧನದಲ್ಲಿರುವ ಅವರು ಪೊಲೀಸರೆದುರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಮೂರನೆಯ ಘಟನೆಯಲ್ಲಿ ಹರ್ಯಾಣದ ಹಿಸಾರ್ ಜಿಲ್ಲೆಯ ಬಡಾಲ ಗ್ರಾಮದ ನಿವಾಸಿಯಾದ ತೇಜ್ಬೀರ್ (24) ಹಾಗೂ ಸುಲ್ತಾನ್ಪುರ್ ಗ್ರಾಮದ ಆತನ ಪತ್ನಿ ಮೀನಾ (22) ಮಂಸಿ ಪಟ್ಟಣದ ಉದ್ಯಾನವನವೊಂದರಲ್ಲಿದ್ದಾಗ, ಜೂನ್ 24ರಂದು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಅವರಿಬ್ಬರೂ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು ಎಂದು ಹೇಳಲಾಗಿದೆ. ಈ ಘಟನೆಯನ್ನು ಮರ್ಯಾದಾ ಹತ್ಯೆ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ದೂರದ ಸಂಬಂಧಿಗಳಾದ ತೇಜ್ಬೀರ್ ಹಾಗೂ ಮೀನಾ ಒಂದೇ ಜಾತಿ(ಜಾಟ್)ಗೆ ಸೇರಿದ್ದರು. ಆದರೆ, ಮೀನಾಳ ಪೋಷಕರು ಅವರಿಬ್ಬರ ವಿವಾಹದ ಕುರಿತು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.
ಈ ಸರಣಿ ಘಟನೆಗಳು ಹರ್ಯಾಣದಲ್ಲಿ ಗಂಭೀರ ಸ್ವರೂಪ ಪಡೆಯುತ್ತಿರುವ ಮರ್ಯಾದಾ ಹತ್ಯೆ ಪ್ರವೃತ್ತಿಯತ್ತ ಬೊಟ್ಟು ಮಾಡುತ್ತಿವೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.