ಹರ್ಯಾಣ: ಹದಿಹರೆಯದ ಮನೆಗೆಲಸದ ಬಾಲಕಿಗೆ ಥಳಿಸಿ, ನಾಯಿಗಳಿಂದ ಕಚ್ಚಿಸಿದ ಮಾಲಕಿ
ಗುರುಗ್ರಾಮ: ಮನೆಕೆಲಸಕ್ಕಿದ್ದ 13 ವರ್ಷದ ಬಾಲಕಿಯನ್ನು ವಿವಸ್ತ್ರಗೊಳಿಸಿ, ಥಳಿಸಿದ್ದಲ್ಲದೇ ಆಕೆಗೆ ನಾಯಿಯಿಂದ ಕಚ್ಚಿಸಿದ ಅಮಾನವೀಯ ಘಟನೆ ಗುರುಗ್ರಾಮದ ಸೆಕ್ಟರ್ 57ರಲ್ಲಿ ನಡೆದಿರುವ ಬಗ್ಗೆ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ಪುತ್ರಿಯನ್ನು ಮನೆ ಮಾಲಕಿಯು ಪದೇ ಪದೇ ಕಬ್ಬಿಣದ ಸಲಾಕೆ ಹಾಗೂ ಸುತ್ತಿಗೆಯಿಂದ ಹೊಡೆಯುತ್ತಿದ್ದಳು. ಆಕೆಯ ಇಬ್ಬರು ಪುತ್ರರು ಆಕೆಯನ್ನು ನಗ್ನಗೊಳಿಸಿ, ಆಕೆಯ ವಿಡಿಯೊ ಚಿತ್ರೀಕರಣ ನಡೆಸಿದ್ದರು ಹಾಗೂ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದರು. ಬಾಯಿಗೆ ಪಟ್ಟಿ ಬಿಗಿದು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದ ಬಾಲಕಿಯನ್ನು ಆಕೆಯ ತಾಯಿ ಹಾಗೂ ಆಕೆಯ ಮಾಲಕ ಶನಿವಾರ ಬಿಡುಗಡೆಗೊಳಿಸಿದ್ದಾರೆ. ನನ್ನ ಪುತ್ರಿಗೆ ಕೇವಲ 48 ಗಂಟೆಗೊಮ್ಮೆ ಊಟ ನೀಡಲಾಗುತ್ತಿತ್ತು ಹಾಗೂ ಆಕೆ ಕೂಗಿಕೊಳ್ಳದಿರಲಿ ಎಂದು ಆಕೆಯ ಬಾಯಿಗೆ ಪಟ್ಟಿ ಬಿಗಿಯಲಾಗಿತ್ತು ಎಂದು ಬಾಲಕಿಯ ತಾಯಿಯು ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಮಾಲಕಿಯು ಆಕೆಯ ಕೈಗೆ ಆ್ಯಸಿಡ್ ಸುರಿದು, ಈ ಕುರಿತು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಳು ಎಂದು ಎಫ್ಐಆರ್ನಲ್ಲಿ ಆರೋಪಿಸಿಲಾಗಿದೆ. ಈ ಪ್ರಕರಣವು ಸೆಕ್ಟರ್ 51 ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಿಹಾರ ಮೂಲದವರಾದ ದೂರುದಾರಳು ತನ್ನ ಪುತ್ರಿಯನ್ನು ಸೆಕ್ಟರ್ 57ರ ನಿವಾಸಿಯಾದ ಶಶಿ ಶರ್ಮ ಎಂಬುವವರ ಮನೆಗೆಲಸಕ್ಕೆ ಸೇರಿಸಿದ್ದೆ. ಅದಕ್ಕಾಗಿ ಜೂನ್ 27ರಂದು ಅವರ ಮನೆ ಬಳಿಯೇ ವಾಹನಗಳನ್ನು ಸ್ವಚ್ಛಗೊಳಿಸುವ ವ್ಯಕ್ತಿಯ ನೆರವನ್ನು ಪಡೆದಿದ್ದೆ ಎಂದು ತಿಳಿಸಿದ್ದಾಳೆ.
ಮನೆಯಲ್ಲಿಯೇ ಉಳಿದು ಕೆಲಸ ಮಾಡಲು ತಿಂಗಳಿಗೆ ರೂ. 9000 ವೇತನವನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಬಾಲಕಿಯ ತಾಯಿಯು ಆ ಮೊತ್ತವನ್ನು ಕೇವಲ ಎರಡು ತಿಂಗಳು ಮಾತ್ರ ಸ್ವೀಕರಿಸಿದ್ದಳು ಎಂದು ಹೇಳಲಾಗಿದೆ.
ಬಾಲಕಿಯ ತಾಯಿಯ ದೂರನ್ನು ಆಧರಿಸಿ ಶಶಿ ಶರ್ಮ ಹಾಗೂ ಆಕೆಯ ಇಬ್ಬರು ಪುತ್ರರ ವಿರುದ್ಧ ಪ್ರಾಣಿಗಳ ಹಿಂಸೆ, ಹಲ್ಲೆ, ಮಹಿಳೆಯ ಘನತೆಗೆ ಧಕ್ಕೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 10 ಹಾಗೂ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.