ತರಾತುರಿಯಲ್ಲಿ ಎಂಎಸ್ಪಿ ಕಾನೂನು ಜಾರಿ ಅಸಾಧ್ಯ: ಕೇಂದ್ರ
Photo: PTI
ಹೊಸದಿಲ್ಲಿ: ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸದೆ ಕನಿಷ್ಠ ಬೆಂಬಲ ಬೆಲೆ ಕಾನೂನನನ್ನು (MSP) ತರಾತುರಿಯಲ್ಲಿ ಜಾರಿಗೆ ತರಲು ಸಾಧ್ಯವಿಲ್ಲವೆಂದು ಕೇಂದ್ರ ಕೃಷಿ ಅರ್ಜುನ ಮುಂಡಾ ಮಂಗಳವಾರ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಸರಕಾರದೊಂದಿಗೆ ರಚನಾತ್ಮಕವಾದ ಮಾತುಕತೆ ನಡೆಸಬೇಕೆಂದು ಅವರು ಪ್ರತಿಭಟನ ನಿರತ ರೈತ ಸಂಘಟನೆಗಳನ್ನು ಆಗ್ರಹಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕೆಲವು ಶಕ್ತಿಗಳು ರೈತರ ಪ್ರತಿಭಟನೆಗೆ ಕಳಂಕ ತರುವ ಸಾಧ್ಯತೆಯಿದ್ದು ಈ ಬಗ್ಗೆ ಅವರು ಕಟ್ಟೆಚ್ಚರ ವಹಿಸಬೇಕೆಂದು ತಿಳಿಸಿದರು.
ರೈತ ಸಂಘಟನೆಗಳ ಜೊತೆ ನಡೆಸಿದ ಮೊದಲ ಸುತ್ತಿನ ಮಾತುಕತೆಯಲ್ಲಿ ಅವರ ಹಲವಾರು ಬೇಡಿಕೆಗಳನ್ನು ನಾವು ಒಪ್ಪಿದ್ದೆವು. ಆದರೆ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಸಹಮತ ಏರ್ಪಟ್ಟಿರಲಿಲ್ಲ. ಈ ಬಗ್ಗೆ ಮಾತುಕತೆ ಈಗಲೂ ನಡೆಯುತ್ತಿದೆ ಎಂದವರು ಹೇಳಿದರು. ಆದರೂ ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರ ಸಮ್ಮಿತಿಸಿದೆ ಎಂದರು.
ಆದಾಗ್ಯೂ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾಯ್ದೆಯನ್ನು ರಚಿಸುವಾಗ ರಾಜ್ಯ ಸರಕಾರ ಸೇರಿದಂತೆ ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.
ಪ್ರತಿಭಟನನಿರತ ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮರ್ಚಾ, ಕಿಸಾನ್ ಮಝದೂರ್ ಮೋರ್ಚಾ ಜೊತೆ ಚಂಡೀಗಡಧಲ್ಲಿ ಕೇಂದ್ರ ಸರಕಾರ ನಡೆಸಿದ ಸಚಿವ ಮಟ್ಟದ ಮಾತುಕತೆಯಲ್ಲಿ ಮುಂಡಾ ಅವರೂ ಪಾಲ್ಗೊಂಡಿದ್ದರು.
ರೈತರು ಈ ದೇಶಕ್ಕೆ ಆಹಾರವನ್ನು ಪೂರೈಸುವವರಾಗಿದ್ದಾರೆ. ಈ ಅನ್ನದಾತರನ್ನು ಜೈಲಿನಲ್ಲಿರಿಸುವುದು ತಪ್ಪು. ರೈತರ ಬೇಡಿಕೆಗಳು ಕಾನೂನುಬದ್ಧವಾಗಿವೆ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿದೆ.