ಕೇಂದ್ರದಿಂದ ತರಾತುರಿಯಲ್ಲಿ ವಿಧೇಯಕಗಳ ಅಂಗೀಕಾರ : ಖರ್ಗೆ ಕಳವಳ
ಮಲ್ಲಿಕಾರ್ಜುನ ಖರ್ಗೆ | Photo; PTI
ಹೊಸದಿಲ್ಲಿ: ಮೋದಿ ಸರಕಾರವು ಸಂಸತ್ ನಲ್ಲಿ ತರಾತುರಿಯಿಂದ ವಿಧೇಯಕಗಳನ್ನು ಅಂಗೀಕರಿಸುತ್ತಿರುವುದಕ್ಕೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಸದನದಲ್ಲಿ ಚರ್ಚೆಯಾಗಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾವಿಸಲು ಪ್ರತಿಪಕ್ಷ ಸದಸ್ಯರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಲಾಗುತ್ತಿಲ್ಲವೆಂದು ಅವರು ದೂರಿದರು.
ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ವಿದಾಯಕೂಟದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ಸದಸ್ಯರನ್ನು ಅಮಾನತುಗೊಳಿಸಿ, ವಿಧೇಯಕಗಳು ಅಂಗೀಕಾರಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ದಯವಿಟ್ಟು ಯಾವುದೇ ವಿಧೇಯಕಗಳನ್ನು ಅವಸರವಸರವಾಗಿ ಅಂಗೀಕರಿಸಬಾರದು ಎಂದು ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
ಯಾವುದೇ ವಿಧೇಯಕದ ಬಗ್ಗೆ ಸೂಕ್ತವಾದ ಚರ್ಚೆಯನ್ನು ನಡೆಸದೇ ಅವುಗಳನ್ನು ಅಂಗೀಕರಿಸಿದಲ್ಲಿ, ಕಾನೂನಿನಲ್ಲಿ ಲೋಪದೋಷಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಚರ್ಚೆಗಳಿಗೆ ಅವಕಾಶವಿದ್ದಲ್ಲಿ ವಿಧೇಯಕಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದಾಗಿದೆ ಎಂದವರು ಹೇಳಿದರು.
ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿರುವ ರಾಜ್ಯ ಸಭಾ ಸದಸ್ಯ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರನ್ನು ಪ್ರಶಂಸಿಸಿದ ಖರ್ಗೆ ಅವರು ಮನಮೋಹನ್ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ 2004-14ರವರೆಗಿನ ಅವಧಿಯಲ್ಲಿ ದೇಶವು ಹೆಚ್ಚು ಬೆಳವಣಿಗೆಯನ್ನು ಕಂಡಿತೆಂದು ಹೇಳಿದರು.
ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ದೇಶವು ಆಹಾರ ಕಾಯ್ದೆ ಹಾಗೂ ಮಾಹಿತಿ ಹಕ್ಕು ಕಾಯ್ದೆಯಂತಹ ಮಹತ್ವದ ಕಾನೂನುಗಳನ್ನು ಜಾರಿಗೆ ತಂದಿದೆ ಎಂದರು.
ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಆಗಿದ್ದ ಉತ್ತಮ ಕೆಲಸಗಳನ್ನು ಪ್ರಶಂಸಿದ್ದಕಾಗಿ ಪ್ರಧಾನಿ ನರೇಂದ ಮೋದಿಯವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.