ದ್ವೇಷಭಾಷಣ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ದೂರು ದಾಖಲು
ಹಿಮಂತ ಬಿಸ್ವ ಶರ್ಮಾ (ಫೋಟೋ: PTI )
ಗುವಾಹತಿ: 'ಮಿಯಾ'ಗಳ ವಿರುದ್ಧ ದ್ವೇಷಭಾಷಣ ಮಾಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐಎಂ ಹಾಗೂ ರಾಜ್ಯಸಭಾ ಸದಸ್ಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷ ಈ ಸಂಬಂಧ ಭಾರತದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಮನವಿ ಸಲ್ಲಿಸಿದೆ.
ಹಿಂದಿನ ಪೂರ್ವಬಂಗಾಳ ಮೂಲದ ಮುಸ್ಲಿಮರನ್ನು ಅಸ್ಸಾಂನಲ್ಲಿ ಮಿಯಾಗಳು ಎಂದು ಸಂಬೋಧಿಸಲಾಗುತ್ತದೆ. ರಾಜ್ಯಸಭೆಯ ಪಕ್ಷೇತರ ಸದಸ್ಯ ಅಜಿತ್ ಕುಮಾರ್ ಭೂಯಾನ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, "ಅಸ್ಸಾಂ ಮೇಲ್ಭಾಗದ ಜನರು ಗುವಾಹತಿಗೆ ಆಗಮಿಸುವ ಮೂಲಕ ಗುವಾಹತಿಯಿಂದ ಮಿಯಾಗಳನ್ನು ತೆರವುಗೊಳಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಇಂಥ ಹೇಳಿಕೆಗಳು ಭಿನ್ನ ಸಮುದಾಯಗಳ ನಡುವೆ ವಿಭಜನೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದು, ರಾಷ್ಟ್ರೀಯ ಏಕತೆಯ ವಿರುದ್ಧದ ಪೂರ್ವಾಗ್ರಹ ಹೊಂದಿವೆ" ಎಂದು ವಿವರಿಸಿದ್ದಾರೆ.
ದ್ವೇಷಭಾಷಣವನ್ನು ಗಂಭೀರ ಅಪರಾಧ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಯಾವುದೇ ದೂರು ನೀಡದೇ ಇದ್ದರೂ, ದ್ವೇಷಭಾಷಣದ ಪ್ರಕರಣಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಕರಣ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ರಾಜ್ಯದಲ್ಲಿ ಶಾಂತಿಗೆ ಧಕ್ಕೆಯಾಗದಂತೆ ಮಾಡುವ ಸಲುವಾಗಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 163ಎ, 153ಬಿ ಹಾಗೂ 295 ಎ ಅನ್ವಯ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ ಹಾಗೂ ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದ ದ್ವೇಷಭಾಷಣ ಇದಾಗಿದೆ ಎಂದು ಸಿಪಿಎಂ ತನ್ನ ದೂರಿನಲ್ಲಿ ಆಪಾದಿಸಿದೆ. ಏತನ್ಮಧ್ಯೆ ಅಸ್ಸಾಂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ ಅವರು, ಹಿಮಾಂತ ಬಿಸ್ವ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.