121 ಜನರು ಬಲಿಯಾಗಿದ್ದ ಹಥ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಭೋಲೆ ಬಾಬಾಗೆ ಕ್ಲೀನ್ ಚಿಟ್

Photo credit: navbharatlive.com
ಲಕ್ನೋ: ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ನ್ಯಾಯಾಂಗ ಆಯೋಗವು ಆದಿತ್ಯನಾಥ್ ಸರಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಘಟನೆಯ ಸಂದರ್ಭದಲ್ಲಿ ಸತ್ಸಂಗವನ್ನು ನಡೆಸುತ್ತಿದ್ದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅಲಿಯಾಸ್ ಸೂರಜಪಾಲ್ ಸಿಂಗ್ ಅವರನ್ನು ದೋಷಮುಕ್ತಗೊಳಿಸಿದೆ. 2024,ಜು.2ರಂದು ನಡೆದಿದ್ದ ಧಾರ್ಮಿಕ ಸಮಾವೇಶದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಹೆಚ್ಚಿನವರು ಮಹಿಳೆಯರು ಸೇರಿದಂತೆ 121 ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಆಯೋಗವು ಕಾರ್ಯಕ್ರಮದ ಆಯೋಜಕರನ್ನು ಕಾಲ್ತುಳಿತ ಘಟನೆಗೆ ಹೊಣೆಯಾಗಿಸಿದೆ.
ಸ್ಥಳೀಯಾಡಳಿತ ಮತ್ತು ಉತ್ತರ ಪ್ರದೇಶ ಪೋಲಿಸರ ಗಂಭೀರ ಲೋಪಗಳನ್ನು ತನ್ನ ವರದಿಯಲ್ಲಿ ಬೆಟ್ಟು ಮಾಡಿರುವ ಆಯೋಗವು, ಜನಸಂದಣಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮತ್ತು ಅಸಮರ್ಪಕ ಭದ್ರತಾ ಕ್ರಮಗಳು ದುರಂತಕ್ಕೆ ಕಾರಣಗಳೆಂದು ಉಲ್ಲೇಖಿಸಿದೆ.
ವಿಶೇಷ ತನಿಖಾ ತಂಡ (ಸಿಟ್) ತನ್ನ ತನಿಖೆಯಲ್ಲಿ ಕಂಡುಕೊಂಡಿದ್ದ ಅಂಶಗಳಿಗೆ ಅನುಗುಣವಾಗಿ ಭೋಲೆ ಬಾಬಾಗೆ ಕ್ಲೀನ್ ಚಿಟ್ ನೀಡಿರುವ ಆಯೋಗವು, ಘಟನೆಯಲ್ಲಿ ಅವರ ನೇರ ಪಾತ್ರವಿರಲಿಲ್ಲ ಹಾಗೂ ಆಯೋಜಕರು ಮತ್ತು ಆಡಳಿತದ ಅಧಿಕಾರಿಗಳು ತಪ್ಪು ನಿರ್ವಹಣೆ ಮತ್ತು ಅವ್ಯವಸ್ಥೆ ದುರಂತಕ್ಕೆ ಕಾರಣವಾಗಿದ್ದವು ಎಂದು ನಿರ್ಣಯಿಸಿದೆ.
ಇಂತಹ ಸಮಾವೇಶಗಳ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಹಲವಾರು ಕ್ರಮಗಳನ್ನು ಶಿಫಾರಸು ಮಾಡಿರುವ ನ್ಯಾಯಾಂಗ ಆಯೋಗವು,ಎಲ್ಲ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೋಲಿಸರು ಕಾರ್ಯಕ್ರಮಕ್ಕೆ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.
ಮಾನವ ಮಂಗಲ ಮಿಲನ್ ಸದ್ಭಾವನಾ ಸಮಾಗಮ ಸಮಿತಿಯು ರತಿಭಾನಪುರದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಿದ್ದು,ಕಾರ್ಯಕ್ರಮದ ಬಳಿಕ ಜನರು ಪೆಂಡಾಲ್ನಿಂದ ಹೊರಕ್ಕೆ ತೆರಳುತ್ತಿದ್ದಾಗ ತಳ್ಳಾಟ ನಡೆದು ಕಾಲ್ತುಳಿತ ಸಂಭವಿಸಿತ್ತು.