ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು (Photo: PTI)
ಹೊಸದಿಲ್ಲಿ: ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ವಯಸ್ಕ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಚಂದ್ರಬಾಬು ನಾಯ್ಡು, ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ತಮ್ಮ ಸರ್ಕಾರ ಕಾನೂನು ತರಲು ಯೋಜಿಸುತ್ತಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಅಮರಾವತಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ, ಹೆಚ್ಚು ಮಕ್ಕಳನ್ನು ಹೊಂದಲು ದಂಪತಿಗಳನ್ನು ಪ್ರೋತ್ಸಾಹಿಸುತ್ತೇವೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವ ಹಿಂದಿನ ಕಾನೂನನ್ನು ರದ್ದುಗೊಳಿಸಿದ್ದೇವೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಪರ್ಧಿಸಲು ಅರ್ಹರಾಗುವಂತೆ ನಾವು ಹೊಸ ಕಾನೂನನ್ನು ತರುತ್ತೇವೆ, ಎಂದು ಹೇಳಿದ್ದಾರೆ.
ಯುವ ಪೀಳಿಗೆ ಅನ್ಯ ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ವಲಸೆ ಹೋಗುವುದರಿಂದ ಹಲವು ಗ್ರಾಮಗಳಲ್ಲಿ ವೃದ್ಧರು ಮಾತ್ರ ಇದ್ದಾರೆ. ಭಾರತದ ಸರಾಸರಿ ಜನಸಂಖ್ಯಾ ಬೆಳವಣಿಗೆಯು 1950ರ ದಶಕದಲ್ಲಿ ಶೇಕಡಾ 6.2% ರಷ್ಟಿದ್ದು, 2021ರಲ್ಲಿ ಈ ಅಂಕಿ ಅಂಶವು 2.1% ಕ್ಕೆ ಇಳಿದಿದೆ ಎಂದು ಚಂದ್ರ ಬಾಬು ನಾಯ್ಡು ಹೇಳಿದ್ದಾರೆ.
ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದುವುದರಿಂದ ಯುವ ಜನಸಂಖ್ಯೆಯ ತ್ವರಿತ ಕುಸಿತಕ್ಕೆ ಕಾರಣವಾಗುತ್ತದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು ಎಂದು ಹೇಳಿದ್ದಾರೆ.