ಹಾಥ್ರಸ್ ಕಾಲ್ತುಳಿತ ಪ್ರಕರಣ | ಪಿಐಎಲ್ ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿದ್ದೇನೆ: ಸಿಜೆಐ ಚಂದ್ರಚೂಡ್
ಡಿ.ವೈ.ಚಂದ್ರಚೂಡ್ | PC : PTI
ಹೊಸದಿಲ್ಲಿ: 121 ಮಂದಿಯನ್ನು ಬಲಿ ಪಡೆದ ಹಾಥ್ರಸ್ ಕಾಲ್ತುಳಿತ ಪ್ರಕರಣದ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಮಂಗಳವಾರ ಸುಪ್ರೀಂಕೋರ್ಟ್ ಹೇಳಿದೆ.
ತಮ್ಮ ಅರ್ಜಿಗಳ ತುರ್ತು ವಿಚಾರಣೆ ನಡೆಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಹಾಗೂ ವಕೀಲ ವಿಶಾಲ್ ತಿವಾರಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, "ನಾನು ನಿನ್ನೆಯೇ ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿದ್ದೇನೆ" ಎಂದು ಹೇಳಿದ್ದಾರೆ.
ಕಾಲ್ತುಳಿತ ಪ್ರಕರಣವನ್ನು ತನಿಖೆ ಮಾಡಲು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ನೇಮಕ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಇದರೊಂದಿಗೆ, ಜುಲೈ 2ರಂದು ನಡೆದ ಘಟನೆಯ ಬಗ್ಗೆ ಹಾಲಿ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಹಾಗೂ ನಿರ್ಲಕ್ಷ್ಯದ ನಡವಳಿಕೆ ಪ್ರದರ್ಶಿಸಿರುವ ಪ್ರಾಧಿಕಾರಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.