"ದೇಶದಲ್ಲಿ ವೈದ್ಯರ ಕೊರತೆ ಇದೆ": ತಪ್ಪು ಮಾಹಿತಿ ನೀಡಿ ವೈದ್ಯಕೀಯ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ಪರ ಹೈಕೋರ್ಟ್ ತೀರ್ಪು
ಸಾಂದರ್ಭಿಕ ಚಿತ್ರ
ಮುಂಬೈ: 2012ರಲ್ಲಿ ವಿದ್ಯಾರ್ಥಿನಿಯೊಬ್ಬಳು ತಾನು ಇತರೆ ಹಿಂದುಳಿದ ವರ್ಗದವಳು ಎಂದು ತಪ್ಪು ಮಾಹಿತಿ ನೀಡಿ ಪಡೆದಿದ್ದ ಪ್ರಮಾಣ ಪತ್ರವನ್ನು ಆಧರಿಸಿ ಮುಂಬೈ ಕಾಲೇಜೊಂದರಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿದ್ದ ಆರೋಪದ ಕುರಿತು ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್, ವೈದ್ಯರ ಅಗತ್ಯವಿರುವುದರಿಂದ ಹಾಗೂ ಆಕೆ ಈಗಾಗಲೇ ವೈದ್ಯಕೀಯ ಪದವಿಯನ್ನು ಪೂರೈಸಿರುವುದರಿಂದ ಆಕೆಯ ವೈದ್ಯಕೀಯ ಪದವಿ ಪ್ರಮಾಣ ಪತ್ರವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್.ಚಂದೂರ್ಕರ್ ಹಾಗೂ ಜಿತೇಂದ್ರ ಜೈನ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, “ನಮ್ಮ ದೇಶದಲ್ಲಿ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ವೈದ್ಯರ ಸಂಖ್ಯೆ ಕಡಿಮೆ ಇದೆ. ಆಕೆಯ ಪದವಿಯನ್ನು ಹಿಂಪಡೆಯುವುದರಿಂದ ದೇಶಕ್ಕೆ ನಷ್ಟವಾಗಲಿದೆ, ಪ್ರಜೆಗಳು ಓರ್ವ ವೈದ್ಯರಿಂದ ವಂಚಿತರಾಗಲಿದ್ದಾರೆ” ಎಂದು ಅಭಿಪ್ರಾಯ ಪಟ್ಟಿತು. ಇದೇ ವೇಳೆ, “ಆಕೆಯ ಪೋಷಕರು ಆಕೆಗೆ ಪ್ರವೇಶ ದೊರಕಿಸಲು ಇತರೆ ಹಿಂದುಳಿದ ವರ್ಗಗಳು ಎಂದು ಹೇಳಿಕೊಂಡು ವಾಮಮಾರ್ಗದಲ್ಲಿ ಪ್ರವೇಶ ಪಡೆದಿರುವುದರಿಂದ ಮತ್ತೊಬ್ಬ ಅರ್ಹ ಅಭ್ಯರ್ಥಿಗೆ ಮಾಡಿದ ವಂಚನೆಯಾಗಿದೆ” ಎಂದೂ ಹೇಳಿದೆ.
“ಒಂದು ವೇಳೆ ವೈದ್ಯಕೀಯ ವೃತ್ತಿಯು ಸುಳ್ಳು ಮಾಹಿತಿಗಳನ್ನು ಆಧರಿಸಿದರೆ, ಅದು ನಿಶ್ಚಿತವಾಗಿ ಈ ಗೌರವಾನ್ವಿತ ವೃತ್ತಿಯ ಪಾಲಿಗೆ ಕಳಂಕವಾಗಿದೆ” ಎಂದು ಹೇಳಿರುವ ಹೈಕೋರ್ಟ್, ಯಾವ ವಿದ್ಯಾರ್ಥಿಯೂ ವಂಚನೆಯ ವಿಷಯಗಳ ಮೇಲೆ ತಮ್ಮ ಬುನಾದಿಯನ್ನು ನಿರ್ಮಿಸಿಕೊಳ್ಳಬಾರದು ಎಂದೂ ಕಿವಿಮಾತು ಹೇಳಿತು. ಆದರೆ, ಈ ವಿಷಯದಲ್ಲಿ ಸಮತೋಲನ ಸಾಧಿಸಲು ಹೈಕೋರ್ಟ್ ಬಯಸಿತು.
ಇದೇ ವೇಳೆ ವಿದ್ಯಾರ್ಥಿನಿ ಲುಬ್ನಾ ಮುಜಾವರ್ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿ ಎಂದು ವಿತರಿಸಲಾಗಿದ್ದ ಪ್ರಮಾಣ ಪತ್ರವನ್ನು ರದ್ದುಪಡಿಸುವ ಮುಂಬೈ ಉಪನಗರ ಜಿಲ್ಲಾಧಿಕಾರಿಯ 2013ರ ನಿರ್ಧಾರವನ್ನು ನ್ಯಾಯಾಲಯವು ಎತ್ತಿ ಹಿಡಿಯಿತು.
ಇದರ ನಂತರ, ಫೆಬ್ರವರಿ, 2014ರಲ್ಲಿ ಆಕೆಯ ಎಂಬಿಬಿಎಸ್ ಪದವಿ ಪ್ರವೇಶವನ್ನು ಸಿಯಾನ್ ನಲ್ಲಿರುವ ಲೋಕಮಾನ್ಯ ತಿಲಕ್ ವೈದ್ಯಕೀಯ ಕಾಲೇಜು ರದ್ದುಗೊಳಿಸಿತ್ತು. ಆದರೆ, ಈಗಾಗಲೇ ಕಾಲ ಸರಿದು ಹೋಗಿರುವುದರಿಂದ ಹಾಗೂ ಆಕೆಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಬಾರದು ಎಂಬ ಷರತ್ತಿನ ಮೇಲೆ ಮಂಜೂರಾಗಿದ್ದ ಮಧ್ಯಂತರ ಆದೇಶವನ್ನು ಆಧರಿಸಿ ಆಕೆಗೆ ತನ್ನ ವ್ಯಾಸಂಗ ಮುಂದುವರಿಸಲು ಅನುಮತಿ ನೀಡಲಾಗಿದೆ. 2017ರಲ್ಲಿ ಆಕೆ ತನ್ನ ಪದವಿ ಪೂರೈಸಿದ್ದಾಳೆ. 2014ರ ನಂತರ ಜಾರಿಯಲ್ಲಿದ್ದ ಮಧ್ಯಂತರ ಆದೇಶದಡಿ ಅರ್ಜಿದಾರಳು ತನ್ನ ಎಂಬಿಬಿಎಸ್ ಪದವಿ ಪೂರೈಸಿದ್ದಾಳೆ. ಹೀಗಾಗಿ, ಈ ಹಂತದಲ್ಲಿ, ಅದರಲ್ಲೂ ಆಕೆ ವೈದ್ಯಳಾಗಿ ಅರ್ಹತೆ ಗಳಿಸಿರುವ ಈ ಸಂದರ್ಭದಲ್ಲಿ ಆಕೆಯ ಪದವಿಯನ್ನು ಹಿಂಪಡೆಯುವುದು ಸೂಕ್ತವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತನ್ನ ತಂದೆಯು ಸುಳ್ಳು ಮಾಹಿತಿ ನೀಡಿರುವುದರಿಂದ ಹಾಗೂ ತನ್ನ ತಾಯಿಯು ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಷಯವನ್ನು ಬಹಿರಂಗಪಡಿಸದಿರುವುದರಿಂದ ವಿದ್ಯಾರ್ಥಿನಿಯು ಪ್ರವೇಶ ಪಡೆದಿದ್ದಾಳೆ. ಹೀಗಾಗಿ ಇನ್ನು ಮೂರು ತಿಂಗಳಲ್ಲಿ ತಾನು ಪ್ರವೇಶ ಪಡೆದಿದ್ದ ಪದವಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಯ ಶುಲ್ಕವನ್ನು ಪಾವತಿಸಬೇಕು ಹಾಗೂ ಹೆಚ್ಚುವರಿಯಾಗಿ ಕಾಲೇಜಿಗೆ ರೂ. 50,000 ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.