ಸಂಗೀತ ಶಿಕ್ಷಕನ ಬಟ್ಟೆ ಕಳಚಿ ಲಾಕಪ್‍ನಲ್ಲಿ ಹಿಂಸೆ: ಪೊಲೀಸರಿಗೆ ಹೈಕೋರ್ಟ್ ಛೀಮಾರಿ
ಮುಂಬೈ: ಜಾಮೀನು ನೀಡಬಹುದಾದ ಪ್ರಕರಣವೊಂದರಲ್ಲಿ ಸಂಗೀತ ಶಿಕ್ಷಕರೊಬ್ಬರನ್ನು ಅಕ್ರಮವಾಗಿ ಬಂಧಿಸಿ ಲಾಕಪ್‍ನಲ್ಲಿ ಬಟ್ಟೆ ಬಿಚ್ಚಿ ಚಿತ್ರಹಿಂಸೆ ನೀಡಿದ ಮುಂಬೈ ಪೊಲೀಸರ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
"ವ್ಯಕ್ತಿಯ ಘನತೆ- ಗೌರವ ಪ್ರಮುಖವಲ್ಲವೇ?" ಎಂದು ಪ್ರಶ್ನಿಸಿದ ವಿಭಾಗೀಯ ಪೀಠ, ಟರ್ಡಿಯೊ ಪೊಲೀಸ್ ಠಾಣೆಯ ಮತ್ತು ಸಾತ್ ರಸ್ತಾ ಲಾಕಪ್‍ನ ಎಲ್ಲ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಡಿಸಿಪಿ ಅಕ್ಬರ್ ಪಠಾಣ್ ಅವರಿಗೆ ಆದೇಶ ನೀಡಿದೆ. ಸಂಗೀತ ಶಿಕ್ಷಕನ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ಅಕ್ರಮ ಬಂಧನದಿಂದ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿದ್ದರು.
ಸಂಗೀತ ಶಿಕ್ಷಕ ಅಶ್ಲೀಲ ವಿಡಿಯೊಗಳನ್ನು ಪ್ರದರ್ಶಿಸಿದ್ದರು ಎಂದು ಆಪಾದಿಸಿ ಜೂನ್ ತಿಂಗಳಲ್ಲಿ ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಮಲಡ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 354ಎ ಮತ್ತು 509ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣವನ್ನು ತರ್‍ದಿಯೊ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ಶಿಕ್ಷಕ ಹಲವು ಬಾರಿ ಠಾಣೆಗೆ ಭೇಟಿ ನೀಡಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಜೂನ್ 17ರಂದು ಶಿಕ್ಷಕನನ್ನು ಬಂಧಿಲಾಗುತ್ತದೆ ಎಂಬ ಮಾಹಿತಿ ಮೇರೆಗೆ ವಕೀಲರು ಜಾಮೀನು ನೀಡಲು ಮುಂದಾಗಿದ್ದರು. ಆದರೂ ಬಂಧಿಸಲಾಗಿತ್ತು. ಮರುದಿನ ವಕೀಲರು ಹೈಕೋರ್ಟ್‍ಗೆ ಮನವಿ ಸಲ್ಲಿಸಿ, 20 ವರ್ಷಗಳಿಂದ ಸಂಗೀತ ಶಿಕ್ಷಕರು ಕಲಾವಿದ ಹಾಗೂ ವಿದ್ಯಾರ್ಥಿ ವರ್ಗದಲ್ಲಿ ಗೌರವ ಹೊಂದಿದ್ದಾರೆ ಎಂದು ವಾದಿಸಿದ್ದರು. ಆರೋಪಿ ಶಿಕ್ಷಕನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಸರ್ಕಾರಿ ಅಭಿಯೋಜಕ ಪ್ರಜಕ್ತಾ ಶಿಂಧೆ ಅಫಿಡವಿಟ್ ಸಲ್ಲಿಸಿ, ಹಿರಿಯ ಇನ್‍ಸ್ಪೆಕ್ಟರ್ ವಿವೇಕ್ ಶಿಂಧೆ ಬೇಷರತ್ ಕ್ಷಮೆ ಯಾಚಿಸಿದ್ದಾಗಿ ಹೇಳಿದ್ದರು. ಪಿಎಸ್‍ಐ ಪ್ರಿಯಾಂಕಾ ಕದಂ, ಪ್ರೊಬೆಷನರಿ ಅಧಿಕಾರಿಯಾಗಿದ್ದು, ಪ್ರಮಾದವಶಾತ್ ಬಂಧಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನು ನ್ಯಾಯಮೂರ್ತಿಗಳು ತೀವ್ರವಾಗಿ ಆಕ್ಷೇಪಿಸಿದರು. ಬಟ್ಟೆ ಹಾಗೂ ಜನಿವಾರವನ್ನು ಕಿತ್ತು ಚಿತ್ರಹಿಂಸೆ ನೀಡಿದ್ದಾಗಿ ಸಂಗೀತ ಶಿಕ್ಷಕ ಆಪಾದಿಸಿದ್ದರು.