ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧದ ಎಫ್ಐಆರ್ ಆದೇಶಕ್ಕೆ ನಾಲ್ಕು ವಾರಗಳ ತಡೆ ನೀಡಿದ ಬಾಂಬೆ ಹೈಕೋರ್ಟ್

ಮಾಧವಿ ಬುಚ್ (PTI)
ಮುಂಬೈ: ಶೇರು ಮಾರುಕಟ್ಟೆ ಹಗರಣ ಹಾಗೂ ನಿಯಮಾವಳಿಗಳ ಉಲ್ಲಂಘನೆ ಆರೋಪದಲ್ಲಿ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಇನ್ನಿತರ ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಮಂಗಳವಾರ ಬಾಂಬೆ ಹೈಕೋರ್ಟ್ ನಾಲ್ಕು ವಾರಗಳ ತಡೆ ನೀಡಿದೆ.
ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸೆಬಿ ಮಾಜಿ ಮುಖ್ಯಾಸ್ಥೆ ಮಾಧವಿ ಬುಚ್ ಹಾಗೂ ಇನ್ನಿತರ ಐವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶಿವಕುಮಾರ್ ದಿಗೆಯವರನ್ನೊಳಗೊಂಡ ಏಕಸದಸ್ಯ ಪೀಠ, ಪ್ರಕರಣದ ವಿವರಗಳನ್ನು ಪರಿಶೀಲಿಸದೆ ಹಾಗೂ ಪ್ರಕರಣದಲ್ಲಿ ಆರೋಪಿಗಳ ನಿರ್ದಿಷ್ಟ ಪಾತ್ರವೇನು ಎಂಬುದನ್ನು ಉಲ್ಲೇಖಿಸದೆ ವಿಶೇಷ ನ್ಯಾಯಾಲಯವು ಮಾರ್ಚ್ 1ರಂದು ಈ ಆದೇಶವನ್ನು ಯಾಂತ್ರಿಕವಾಗಿ ಹೊರಡಿಸಿದೆ ಎಂದು ಅಭಿಪ್ರಾಯ ಪಟ್ಟಿತು.
“ಹೀಗಾಗಿ, ಈ ಆದೇಶಕ್ಕೆ ಮುಂದಿನ ವಿಚಾರಣೆಯ ದಿನಾಂಕದವರೆಗೂ ತಡೆ ನೀಡಲಾಗಿದೆ. ಮೇಲ್ಮನವಿಗೆ ಸಂಬಂಧಿಸಿದಂತೆ ಈ ಪ್ರಕರಣದ ದೂರುದಾರರಾದ ಸಪನ್ ಶ್ರೀವಾಸ್ತವ ಅವರಿಗೆ ತಮ್ಮ ಪ್ರಮಾಣ ಪತ್ರ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸೆಬಿಯ ಮಾಜಿ ಮುಖ್ಯಸ್ಥೆ ಮಾಧವಿ ಬುಚ್, ಸೆಬಿಯ ಮೂವರು ಪೂರ್ಣಕಾಲಿಕ ನಿರ್ದೇಶಕರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ್ ಜಿ. ಹಾಗೂ ಕಮಲೇಶ್ ಚಂದ್ರ ವರ್ಷ್ನೆ ಮತ್ತು ಬಾಂಬೆ ಶೇರು ಮಾರುಕಟ್ಟೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ್ ಕಾರ್ಯನಿರ್ವಹಣಾಧಿಕಾರಿ ರಾಮಮೂರ್ತಿ ಹಾಗೂ ಅದರ ಮಾಜಿ ಅಧ್ಯಕ್ಷ ಮತ್ತು ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕ ಪ್ರಮೋದ ಅಗರ್ವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
1994ರಲ್ಲಿ ಕಂಪನಿಯೊಂದನ್ನು ಬಾಂಬೆ ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವಾಗ ಅಕ್ರಮ ನಡೆಸಲಾಗಿದೆ ಎಂಬ ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಇನ್ನಿತರ ಐವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ನಮ್ಮ ವಿರುದ್ಧದ ಆದೇಶ ಕಾನೂನುಬಾಹಿರ ಹಾಗೂ ನಿರಂಕುಶವಾಗಿದೆ ಎಂದೂ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಆರೋಪಿಗಳು ಭಾಗಿಯಾಗಿರುವ ಹಣಕಾಸು ಅವ್ಯವಹಾರ, ನಿಯಮಾವಳಿಗಳ ಉಲ್ಲಂಘನೆ ಹಾಗೂ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಪತ್ರಕರ್ತ ಸಪನ್ ಶ್ರೀವಾಸ್ತವ ಎಂಬವರು ಸಲ್ಲಿಸಿದ್ದ ದೂರನ್ನು ಆಧರಿಸಿ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಮಾರ್ಚ್ 1ರಂದು ವಿಶೇಷ ನ್ಯಾಯಾಲಯ ಆದೇಶಿಸಿತ್ತು.