“ಅವರು ವಾಗ್ದಾಳಿ ನಡೆಸಿದ್ದು ಬಿಜೆಪಿಯ ಮೇಲೆ, ಹಿಂದೂಗಳ ಮೇಲಲ್ಲ”: ರಾಹುಲ್ ಗಾಂಧಿಯ ಸಂಸತ್ ಭಾಷಣ ಕುರಿತು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ (PTI)
ಹೊಸದಿಲ್ಲಿ: ಸೋಮವಾರ ವಿಪಕ್ಷ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣವು ಬಿಜೆಪಿ ನಾಯಕರ ತೀವ್ರ ವಿರೋಧಕ್ಕೆ ಕಾರಣವಾಗಿರುವ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ತಮ್ಮ ಸಹೋದರನ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಆಡಳಿತ ಬಿಜೆಪಿ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಎಲ್ಲಾ ಹಿಂದುಗಳ ಬಗ್ಗೆ ಅಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
“ಅವರು (ರಾಹುಲ್) ಹಿಂದುಗಳನ್ನು ಅವಮಾನಿಸಲು ಸಾಧ್ಯವಿಲ್ಲ. ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಬಿಜೆಪಿ ಹಾಗೂ ಅದರ ನಾಯಕರ ಬಗ್ಗೆ ಮಾತನಾಡಿದ್ದಾರೆ,” ಎಂದು ಪ್ರಿಯಾಂಕಾ ಹೇಳಿದ್ದಾರೆ.
ನಂತರ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಪ್ರಿಯಾಂಕಾ, “ಮಹಿಳೆಯರು ಹಣದುಬ್ಬರದ ಬಗ್ಗೆ ಭಯ ಹೊಂದಿದ್ದಾರೆ, ರೈತರು ಕರಾಳ ಕಾನೂನುಗಳ ಬಗ್ಗೆ, ಯುವಜನತೆ ಅಗ್ನಿವೀರ್ ಬಗ್ಗೆ, ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಹಾಗೂ ಅಲ್ಪಸಂಖ್ಯಾತರು ದ್ವೇಷ ಮತ್ತು ಹಿಂಸೆಯ ಬಗ್ಗೆ ಭಯ ಹೊಂದಿದ್ದಾರೆ... ಎಲ್ಲಿ ಭೀತಿ ಹರಡಬಹುದೆಂದು ಅವರಿಗೆ ಅನಿಸುತ್ತದೆಯೋ ಅಲ್ಲೆಲ್ಲಾ ಬಿಜೆಪಿ ಮತ್ತು ಆರೆಸ್ಸೆಸ್ ಭೀತಿ ಹರಡುತ್ತಿವೆ,” ಎಂದು ಅವರು ಬರೆದಿದ್ದಾರೆ.
“ಭಯ, ಹಿಂಸೆ ಮತ್ತು ದ್ವೇಷದಿಂದ ಯಾರಿಗೂ ಪ್ರಯೋಜನವಿಲ್ಲ, ಬಿಜೆಪಿ ಈ ರೀತಿಯ ರಾಜಕಾರಣವನ್ನು ಕೈಬಿಡಬೇಕು,” ಎಂದು ಅವರು ಹೇಳಿದ್ದಾರೆ.