ಅವರು ಮಹಾದೇವನ ಹೆಸರನ್ನೂ ಬಿಟ್ಟಿಲ್ಲ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ನರೇಂದ್ರ ಮೋದಿ Photo- PTI
ರಾಂಚಿ: ಮದಹಾದೇವ್ ಬೆಟ್ಟಿಂಗ್ ಆ್ಯಪ್ನಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶಾಮೀಲಾಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವು ಛತ್ತೀಸ್ಗಢದಲ್ಲಿ ತನ್ನ ಚುನಾವಣಾ ಪ್ರಚಾರಕ್ಕೆ ಅಕ್ರಮ ಬೆಟ್ಟಿಂಗ್ ಆಪರೇಟರ್ಗಳು ತರುವ ಹವಾಲಾ ಹಣವನ್ನು ಬಳಸುತ್ತಿದೆ ಎಂದು ರಾಜ್ಯದಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಮಾಲಕರು ಬಘೇಲ್ಗೆ 508 ಕೋಟಿ ರೂಪಾಯಿ ಪಾವತಿಸಿದ್ದಾರೆ ಎನ್ನುವ ‘‘ಆಘಾತಕಾರಿ ಸಂಗತಿ’’ಯು ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಓರ್ವ ಕ್ಯಾಶ್ ಕೊರಿಯರ್ (ಹಣ ಸಾಗಾಟಗಾರ) ನೀಡಿರುವ ಹೇಳಿಕೆಯಿಂದ ಹೊರಬಂದಿದೆ ಎಂದು ಜಾರಿ ನಿರ್ದೇಶನಾಲಯವು ಶುಕ್ರವಾರ ಹೇಳಿದ ಬಳಿಕ ಪ್ರಧಾನಿ ಈ ವಾಗ್ದಾಳಿ ನಡೆಸಿದ್ದಾರೆ.
‘‘ನಾವು ಹೇಳುವುದನ್ನು ಮಾಡುತ್ತೇವೆ. ಇದು ಭಾರತೀಯ ಜನತಾ ಪಕ್ಷದ ಇತಿಹಾಸ. ಛತ್ತೀಸ್ಗಢವನ್ನು ಸೃಷ್ಟಿಸಿದು ಬಿಜೆಪಿ. ಛತ್ತೀಸ್ಗಢಕ್ಕೆ ಬಿಜೆಪಿಯು ಒಂದು ಒಳ್ಳೆ ರೂಪ ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷದ ‘‘ಸುಳ್ಳಿನ ಸೌಧ’’ವು ಬಿಜೆಪಿಯ ‘ಸಂಕಲ್ಪ ಪಾತ್ರ’ದ ದಾರಿಯಲ್ಲಿ ನಿಂತಿದೆ. ಭ್ರಷ್ಟಾಚಾರದ ಮೂಲಕ ತನ್ನ ತಿಜೋರಿಗಳನ್ನು ತುಂಬಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ’’ ಎಂದು ದುರ್ಗ್ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದರು.