ತಮ್ಮ ಮತ ಬ್ಯಾಂಕ್ ಕೈಬಿಟ್ಟು ಹೋಗುತ್ತದೆಂದು ಅವರು ಅಯೋಧ್ಯೆಗೆ ಭೇಟಿ ನೀಡುವುದಿಲ್ಲ: ಅಖಿಲೇಶ್ ಯಾದವ್ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
ಅಖಿಲೇಶ್ ಯಾದವ್,ಯೋಗಿ ಆದಿತ್ಯನಾಥ್ | Photo: PTI
ಲಕ್ನೊ: ಅಯೋಧ್ಯೆಗೆ ಭೇಟಿ ನೀಡಿ ಎಂಬ ವಿಧಾನಸಭಾಧ್ಯಕ್ಷರ ಆಮಂತ್ರಣವನ್ನು ನಿರಾಕರಿಸಿರುವ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಅವರಿಗೆ ತಮ್ಮ ಮತ ಬ್ಯಾಂಕ್ ಕೈಬಿಟ್ಟು ಹೋಗುವ ಭೀತಿ” ಎಂದು ವ್ಯಂಗ್ಯವಾಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ತಮ್ಮ ಮತ ಬ್ಯಾಂಕ್ ಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಅವರು ಅಯೋಧ್ಯೆಗೆ ಭೇಟಿ ನೀಡುವುದಿಲ್ಲ” ಎಂದೂ ಆದಿತ್ಯನಾಥ್ ಟೀಕಿಸಿದ್ದಾರೆ.
ವಿಧಾನಸಭೆಯ ಎಲ್ಲ ಸದಸ್ಯರೂ ಫೆಬ್ರವರಿ 11ರಂದು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ವಿಧಾನಸಭಾಧ್ಯಕ್ಷ ಸತೀಶ್ ಮಹಾನಾ ನೀಡಿದ್ದ ಆಮಂತ್ರಣವನ್ನು ಸಮಾಜವಾದಿ ಪಕ್ಷವು ನಿರಾಕರಿಸಿತ್ತು.
ಇದಕ್ಕೂ ಮುನ್ನ, “ಭಾರತವು ವಿಶ್ವದ ಐದನೆ ಬಲಿಷ್ಠ ರಾಷ್ಟ್ರವಾಗಿದೆ ಎಂಬ ವಾಸ್ತವದ ಕುರಿತು ಅಖಿಲೇಶ್ ಯಾದವ್ ಅವರಿಗೆ ಸಮಸ್ಯೆ ಇದ್ದಂತಿದೆ” ಎಂದು ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಚುಚ್ಚಿದ್ದರು.
“ಉತ್ತರ ಪ್ರದೇಶವು ಪ್ರಥಮ ಸ್ಥಾನಕ್ಕೇರಿದೆ ಎಂಬ ಸಂಗತಿಯ ಕುರಿತೂ ಅವರಿಗೆ (ಅಖಿಲೇಶ್ ಯಾದವ್) ಸಮಸ್ಯೆ ಇರುವಂತಿದೆ” ಎಂದೂ ಅವರು ಹೇಳಿದರು. ಈ ಮಾತಿಗೆ ಅಖಿಲೇಶ್ ಯಾದವ್ ಆಕ್ಷೇಪ ವ್ಯಕ್ತಪಡಿಸಿದಾಗ, “ನೀವು ಈಗಾಗಲೇ ವಿಧಾನಸಭಾಧ್ಯಕ್ಷರ ಆಮಂತ್ರಣವನ್ನು ನಿರಾಕರಿಸಿದ್ದೀರಿ. ನಿಮಗೆ ಅಯೋಧ್ಯೆಗೆ ಹೋಗುವುದು ಬೇಕಿಲ್ಲ ಹಾಗೂ ನೀವು ಪದೇ ಪದೇ ಬ್ರಿಟನ್ ಗೆ ಭೇಟಿ ನೀಡುತ್ತೀರಿ. ನಿಮ್ಮ ವಿಮಾನ ಯಾನದ ಟಿಕೆಟ್ ಅನ್ನು ಯಾರು ಕಾದಿರಿಸುತ್ತಾರೆ ಎಂಬ ಸಂಗತಿ ನಿಮಗೆ ತಿಳಿದೇ ಇದೆ” ಎಂದು ಮತ್ತೊಮ್ಮೆ ವ್ಯಂಗ್ಯವಾಡಿದರು.