ಮೋದಿ ಆಡಳಿತದಲ್ಲಿ ದೇಶದ ಆರೋಗ್ಯ ವ್ಯವಸ್ಥೆ ರೋಗಗ್ರಸ್ತ: ಖರ್ಗೆ ವಾಗ್ದಾಳಿ
‘ಏಮ್ಸ್ ಸೇರಿದಂತೆ ದೇಶದ ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯರು,ಸಿಬ್ಬಂದಿಯ ಕೊರತೆ’
ಮಲ್ಲಿಕಾರ್ಜುನ ಖರ್ಗೆ ,| Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರವಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರದ ಬಿಜೆಪಿ ಸರಕಾರವು ದೇಶದ ಆರೋಗ್ಯ ವ್ಯವಸ್ಥೆಯನ್ನು ರೋಗಗ್ರಸ್ತಗೊಳಿಸಿದೆ. ಏಮ್ಸ್ ನಂತಹ ಉನ್ನತ ವೈದ್ಯಕೀಯ ಸಂಸ್ಥೆಗಳು ಕೂಡಾ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ ಜನತೆ ಈಗ ಎಚ್ಚೆತ್ತುಕೊಂಡಿದ್ದು, ಮೋದಿ ಸರಕಾರಕ್ಕೆ ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಖರ್ಗೆ ಅವರು ಎಕ್ಸ್(ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ಲೂಟಿ ಹಾಗೂ ಹುಸಿ ಭರವಸೆಗಳು ದೇಶವನ್ನು ಅಸ್ವಸ್ಥಗೊಳಿಸಿವೆ. ಮೋದಿ ಜೀಯವರು ಆಡುವ ಪ್ರತಿ ಪದದಲ್ಲೂ ಸುಳ್ಳುಗಳು ಪೋಣಿಸಲ್ಪಟ್ಟಿವೆ. ತಾವು ಹಲವಾರು ಏಮ್ಸ್ಗಳನ್ನು ಸ್ಥಾಪಿಸಿರುವುದಾಗಿ ಅವರು (ಕೇಂದ್ರ ಸರಕಾರ) ಹೇಳುತ್ತಿದ್ದಾರೆ. ಆದರೆ, ಏಮ್ಸ್ಗಳು ವೈದ್ಯರು ಹಾಗೂ ಸಿಬ್ಬಂದಿಯ ತೀವ್ರ ಕೊರತೆಯಿಂದ ಬಳಲುತ್ತಿದೆ ಎಂಬುದು ಸತ್ಯ . ಶ್ರೀಮಾನ್ ಮೋದಿಯವರೇ, ಕೊರೋನ ಸಾಂಕ್ರಾಮಿಕ ಹಾವಳಿಯ ಸಮಯದಲ್ಲಿ ನಿರ್ಲಕ್ಷ ವಹಿಸಿದ್ದರಿಂದ ಹಿಡಿದು ‘ಆಯುಷ್ಮಾನ್ ಭಾರತ’ ಯೋಜನೆಯ ಹಗರಣಗ ತನಕ ನಿಮ್ಮ ಸರಕಾರವು ದೇಶದ ಆರೋಗ್ಯವ್ಯವಸ್ಥೆಯನ್ನು ರೋಗಗ್ರಸ್ತಗೊಳಿಸಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
‘‘ದೇಶದ ಜನತೆ ಎಚ್ಚೆತ್ತುಕೊಂಡಿದ್ದಾರೆ. ನಿಮ್ಮ ವಂಚನೆಯ ಅರಿವಾಗಿದೆ ಹಾಗೂ ನಿಮ್ಮ ಸರಕಾರಕ್ಕೆ ವಿದಾಯ ಹೇಳುವ ಸಮಯ ಬಂದಿದೆ’’ ಎಂದವರು ಹೇಳಿದ್ದಾರೆ.
ದೇಶಾದ್ಯಂತ ಏಮ್ಸ್ಗಳಲ್ಲಿ 5527 ಬೋಧಕ ಹುದ್ದೆಗಳನ್ನು ಮಂಜೂರು ಮಾಡಿದ್ದು, ಆ ಪೈಕಿ ಪ್ರಸಕ್ತ 2161 ಹುದ್ದೆಗಳು ಖಾಲಿ ಉಳಿದಿವೆ.ದಿಲ್ಲಿಯ ಏಮ್ಸ್ನಲ್ಲಿ ಗರಿಷ್ಠ ಸಂಖ್ಯೆಯ ಬೋಧಕ ಹುದ್ದೆಗಳು ಖಾಲಿಬಿದ್ದಿದ್ದು, ಇದು ಮಂಜೂರಾದ ಒಟ್ಟು ಹುದ್ದೆಗಳ ಶೇ.28ರಷ್ಟಾಗುತ್ತುದೆ.