ಬಿಸಿಲ ಬೇಗೆಗೆ ರಾಷ್ಟ್ರ ರಾಜಧಾನಿಯಲ್ಲಿ 5 ಬಲಿ
Image Source : india tv
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ 72 ಗಂಟೆಗಳ ಅವಧಿಯಲ್ಲಿ ಉಷ್ಣಮಾರುತಕ್ಕೆ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ. ಈ ಐದು ಮಂದಿ ಬಿಸಿಲ ಹೊಡೆತಕ್ಕೆ ಅಸ್ವಸ್ಥರಾಗಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 17ರಂದು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ವ್ಯಕ್ತಿ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದು, ಅದೇ ದಿನ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ಮಹಿಳೆ ಕೂಡಾ ಮಂಗಳವಾರ ಮೃತಪಟ್ಟಿದ್ದಾರೆ. 40 ವರ್ಷದ ಮಹಿಳಾ ಕೂಲಿ ಕಾರ್ಮಿಕೆ ಮತ್ತು 60 ವರ್ಷ ವಯಸ್ಸಿನ ಭದ್ರತಾ ಸಿಬ್ಬಂದಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಮಹಿಳೆ ಸೋಮವಾರ ಹಾಗೂ ಪುರುಷ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ಲೋಕನಾಯಕ ಆಸ್ಪತ್ರೆಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. 39 ವರ್ಷ ವಯಸ್ಸಿನ ಜನಕಪುರಿಯ ಕಾರು ಮೆಕ್ಯಾನಿಕ್ ಜೂನ್ 15ರಂದು 106 ಡಿಗ್ರಿ ಫ್ಯಾರನ್ಹೀಟ್ ತಾಪಮಾನದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಅವರು ಕೊನೆಯುಸಿರೆಳೆದರು.
ಈ ವರ್ಷದ ಅತ್ಯಧಿಕ ಕನಿಷ್ಠ ತಾಪಮಾನ 33.8 ಡಿಗ್ರಿ ಸೆಲ್ಷಿಯಸ್ ಮಂಗಳವಾರ ದಾಖಲಾಗಿದ್ದು, ಇದು ಆರು ವರ್ಷಗಳಲ್ಲೇ ಜೂನ್ ತಿಂಗಳ ಅತ್ಯಧಿಕ ಸೆಖೆಯ ರಾತ್ರಿ ಎನಿಸಿಕೊಂಡಿದೆ.
ಬಿಸಿಲ ಬೇಗೆಯಿಂದಾಗಿ ವಿದ್ಯುತ್ ಬಳಕೆ ಸರ್ವಕಾಲಿಕ ದಾಖಲೆಯನ್ನು ಕಂಡಿದ್ದು, ಮಂಗಳವಾರ ಮಧ್ಯಾಹ್ನ 8647 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.