ಬಿಸಿಗಾಳಿ: ಲೇಹ್ ಗೆ ಸತತ ನಾಲ್ಕನೇ ದಿನ ವಿಮಾನ ರದ್ದು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಕ್ಷಿಣ ರಾಜ್ಯ ಕೇರಳದಲ್ಲಿ ವ್ಯಾಪಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ ದೇಶದ ಉತ್ತರದ ತುತ್ತತುದಿ ಲೆಹ್ ಪ್ರದೇಶದಲ್ಲಿ ಅಸಾಧಾರಣ ಬಿಸಿಗಾಳಿಯಿಂದಾಗಿ ಸತತ ನಾಲ್ಕನೇ ದಿನ ಕೂಡಾ ವಿಮಾನಯಾನ ರದ್ದುಪಡಿಸಲಾಗಿದೆ. ದೇಶದ ಅತಿ ಎತ್ತರದ ವಿಮಾನ ನಿಲ್ದಾಣಕ್ಕೆ ನಾಲ್ಕು ವಿಮಾನಗಳ ಯಾನವನ್ನು ಇಂಡಿಗೊ ಹಾಗೂ ಸ್ಪೆöÊಸ್ ಜೆಟ್ ರದ್ದುಪಡಿಸಿವೆ. ನಿರೀಕ್ಷಿತ ಪ್ರತಿಕೂಲ ಹವಾಮಾನದ ಕಾರಣದಿಂದ ಲೆಹ್ನ ಕುಶೋಕ್ ಬಕುಲಾ ರಿಂಪೋಚಿ ನಿಲ್ದಾಣಕ್ಕೆ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಎಎಐಗೆ ಕಾರಣ ನೀಡಲಾಗಿದೆ.
ಲಡಾಖ್ ನಲ್ಲಿ ಅತ್ಯಧಿಕ ತಾಪಮಾನದ ಕಾರಣದಿಂದ ಜುಲೈ 27ರಿಂದೀಚೆಗೆ 16 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಲೆಹ್ ನಲ್ಲಿ ತಾಪಮಾನ 32 ಡಿಗ್ರಿ ಸೆಲ್ಷಿಯಸ್ ತಲುಪಿದಾಗ ವಿಮಾನಗಳನ್ನು ರದ್ದುಪಡಿಸಲಾಗುತ್ತದೆ. "ಹವಾಮಾನ ವೈಪರೀತ್ಯದಿಂದಾಗಿ (ಅತಿ ಎತ್ತರದಲ್ಲಿ ಅತ್ಯಧಿಕ ಉಷ್ಣಾಂಶ) ಕಾರಣದಿಂದ ಲೆಹ್ ವಿಮಾನ ನಿಲ್ದಾಣಕ್ಕೆ ವಿಮಾನಯಾನ ರದ್ದಾಗುತ್ತಿರುವುದು ಬಹುಶಃ ಇದೇ ಮೊದಲು. ಈ ಹಿಂದೆ ಸತತ ಮೂರು ದಿನಗಳ ಕಾಲ ಯಾನ ರದ್ದಾದ ನಿದರ್ಶನಗಳು ಇಲ್ಲ" ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.
ಲೆಹ್ ವಿಮಾನ ನಿಲ್ದಾಣಕ್ಕೆ ಪ್ರತಿದಿನ 15-16 ವಿಮಾನಗಳ ಆಗಮನ ಮತ್ತು ನಿರ್ಗಮನವಾಗುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 3.3 ಕಿಲೋಮೀಟರ್ ಎತ್ತರದಲ್ಲಿದ್ದು, ವಿಶ್ವದಲ್ಲೇ ಅತಿ ಎತ್ತರದ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಅತಿ ಎತ್ತರದ ಪ್ರದೇಶದಲ್ಲಿ ತಾಪಮಾನ ಅಧಿಕವಾದಾಗ ಗಾಳಿ ಹಿಮ್ಮುಖವಾಗುತ್ತದೆ. ಅಂದರೆ ವಿಮಾನದ ಎಂಜಿನ್ ಗಳು ಟೇಕಾಫ್ ಮಾಡಲು ಅಗತ್ಯವಾದ ವೇಗವನ್ನು ನೀಡುವುದಿಲ್ಲ" ಎಂದು ಹಿರಿಯ ಪೈಲಟ್ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.