ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶದಲ್ಲಿ ಮುಂಗಾರು ಮಾರುತ ವ್ಯಾಪಿಸುತ್ತಿರುವಂತೆಯೇ, ದೇಶದಲ್ಲಿ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೊರಡಿಸಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಸುರಿಯುತ್ತಿರುವ ಅತ್ಯಂತ ಭಾರೀ ಮಳೆಯು ಮುಂದಿನ 24 ಗಂಟೆಗಳ ಕಾಲ ಮುಂದುವರಿಯುತ್ತದೆ ಹಾಗೂ ಬಳಿಕ ಮಳೆಯ ತೀವ್ರತೆಯು ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘‘ದೇಶದಲ್ಲಿ ಮುಂಗಾರು ಮಾರುತ ವ್ಯಾಪಿಸುತ್ತಿರುವಂತೆಯೇ, ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಕಳೆದ 2-3 ದಿನಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಪ್ರದೇಶಗಳಲ್ಲಿ, ಅಂದರೆ ದಕ್ಷಿಣ ಮತ್ತು ಮಧ್ಯ ಮಹಾರಾಷ್ಟ್ರ, ಮರಾಠವಾಡ, ದಕ್ಷಿಣ ಮಧ್ಯ ಮಹಾರಾಷ್ಟ್ರ, ಕೊಂಕಣ್ ಹಾಗೂ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯು ಮುಂದುವರಿಯುವ ನಿರೀಕ್ಷೆಯಿದೆ’’ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಸೋಮಾ ಸೇನ್ ರಾಯ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.