ಗುಜರಾತ್ ನಲ್ಲಿ ಭಾರೀ ಮಳೆ, ಟ್ರಾಕ್ಟರ್-ಟ್ರಾಲಿಯಲ್ಲಿ ಕೊಚ್ಚಿ ಹೋದ 7 ಮಂದಿ
PC : indiatoday.in
ಗಾಂಧಿನಗರ : ಗುಜರಾತ್ನಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳು ಜಲಾವೃತವಾಗಿವೆ ಮತ್ತು ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಮುಖ್ಯವಾಗಿ, ನವಸಾರಿಯಲ್ಲಿ ಪ್ರವಾಹ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದು, ಭಾರತೀಯ ಹವಾಮಾನ ಇಲಾಖೆಯು ಆ ಜಿಲ್ಲೆಗೆ ಸೋಮವಾರಕ್ಕೆ ರೆಡ್ ಅಲರ್ಟ್ (ಗರಿಷ್ಠ ಅಪಾಯದ ಎಚ್ಚರಿಕೆ) ಹೊರಡಿಸಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದಕ್ಷಿಣ ಗುಜರಾತ್ನ ವಲ್ಸಾಡ್, ಟಪಿ, ನವಸಾರಿ, ಸೂರತ್, ನರ್ಮದಾ ಮತ್ತು ಪಂಚಮಹಲ್ ಜಿಲ್ಲೆಗಳು ಪ್ರವಾಹದಿಂದಾಗಿ ಅತ್ಯಧಿಕ ಹಾನಿಗೊಳಗಾಗಿವೆ ಎಂದು ಅವರ ಕಚೇರಿ ತಿಳಿಸಿದೆ.
ಮೊರ್ಬಿ ಜಿಲ್ಲೆಯಲ್ಲಿ, ನದಿಯೊಂದರ ಪ್ರವಾಹದ ನೀರು ಹರಿಯುತ್ತಿದ್ದ ರಸ್ತೆಯನ್ನು ದಾಟುತ್ತಿದ್ದ ವೇಳೆ ಕೊಚ್ಚಿ ಹೋಗಿರುವ ಟ್ರಾಕ್ಟರ್-ಟ್ರಾಲಿಯಲ್ಲಿದ್ದ ಏಳು ಜನರಿಗಾಗಿ ಎನ್ಡಿಆರ್ಎಫ್ ಶೋಧ ಕಾರ್ಯ ನಡೆಸುತ್ತಿದೆ.
ನವಸಾರ ಜಿಲ್ಲೆಯ ಖೆರ್ಗಮ್ ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 35.6 ಸೆಂಟಿ ಮೀಟರ್ ಮಳೆಯಾಗಿದೆ. ಇದೇ ಅವಧಿಯಲ್ಲಿ ನರ್ಮದಾ, ಸೌರಾಷ್ಟ್ರ, ರಾಜ್ಕೋಟ್, ತಾಪಿ, ಮಹಿಸಾಗರ್, ಮೊರ್ಬಿ, ದಾಹೋಡ್ ಮತ್ತು ವಡೋದರ ಜಿಲ್ಲೆಗಳಲ್ಲಿ 10 ಸೆಂಟಿಮೀಟರ್ಗೂ ಅಧಿಕ ಮಳೆ ಸುರಿದಿದೆ.