ಜಮ್ಮುಕಾಶ್ಮೀರ | ಮೇಘಸ್ಫೋಟದಿಂದ ಪ್ರವಾಹ ಸೃಷ್ಟಿ : ಮೂವರು ಮೃತ್ಯು, 100ಕ್ಕೂ ಅಧಿಕ ಜನರ ರಕ್ಷಣೆ

Photo credit: PTI
ರಂಬನ್: ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಭಾರೀ ಮಳೆಯಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ. 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರಂತರ ಮಳೆಯಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಲವೆಡೆ ಭೂಕುಸಿತ ಮತ್ತು ಮಣ್ಣು ಕುಸಿತ ಸಂಭವಿಸಿದೆ. ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರಂಬನ್ನ ಸೆರಿ ಬಾಗ್ನಾ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಸಹೋದರರಾದ ಅಕಿಬ್ ಅಹ್ಮದ್ ಮತ್ತು ಮುಹಮ್ಮದ್ ಸಾಕಿಬ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಧರಮ್ಕುಂಡ್ನಲ್ಲಿ ಚೆನಾಬ್ ನದಿ ಬಳಿಯ ಹಳ್ಳಿಯೊಂದಕ್ಕೆ ದಿಢೀರ್ ಪ್ರವಾಹ ಅಪ್ಪಳಿಸಿದೆ.
ಧರಮ್ಕುಂಡ್ನಲ್ಲಿ 10 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 25 ರಿಂದ 30 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 90 ರಿಂದ 100 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಧರಮ್ಕುಂಡ್ ಪೊಲೀಸರು ತಿಳಿಸಿದ್ದಾರೆ.