ಪುಣೆ, ಮುಂಬೈಯಲ್ಲಿ ಭಾರೀ ಮಳೆ: ವಿದ್ಯುದಾಘಾತದಿಂದ ಮೂವರು ಮೃತ್ಯು
ವಿಮಾನ ಹಾರಾಟದಲ್ಲಿ ವ್ಯತ್ಯಯ; ಜನಜೀವನ ಅಸ್ತವ್ಯಸ್ತ
ಸಾಂದರ್ಭಿಕ ಚಿತ್ರ | PTI
ಪುಣೆ: ಭಾರಿ ಮಳೆಯಿಂದಾಗಿ ಪುಣೆಯ ಹಲವು ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಪುಣೆಯ ಪಿಂಪ್ರಿ-ಚಿಂಚ್ವಾಡ್ ನ ವಸತಿ ಸಮುಚ್ಚಯಗಳು ಪ್ರವಾಹಕ್ಕೆ ತುತ್ತಾಗಿವೆ. ಈ ನಡುವೆ, ಜಲಾವೃತಗೊಂಡಿದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯುದಾಘಾತಕ್ಕೆ ತುತ್ತಾಗಿದ್ದಾರೆ.
ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿನ ಪ್ರವಾಹಪೀಡಿತ ಬೀದಿಯೊಂದರಿಂದ ಕೈಗಾಡಿಯನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ ಮೂವರು ವಿದ್ಯುದಾಘಾತಕ್ಕೆ ತುತ್ತಾಗಿದ್ದಾರೆ. ಅಭಿಷೇಕ್ ಘಾನೇಕರ್, ಆಕಾಶ್ ಮಾನೆ ಹಾಗೂ ಶಿವ ಪರಿಹಾರ್ ಬೀದಿ ಬದಿ ಉಪಾಹಾರ ಮಾರಾಟಗಾರರಾಗಿದ್ದು, ಅವರು ತಮ್ಮ ಮಳಿಗೆಯೆದುರು ಕೈಗಾಡಿಯಲ್ಲಿ ಉಪಾಹಾರ ಮಾರಾಟ ಮಾಡುವವರಾಗಿದ್ದಾರೆ.
ಭಾರಿ ಮಳೆಯಿಂದಾಗಿ ಮುಂಬೈ ಹಾಗೂ ಅದರ ನೆರೆಪ್ರದೇಶವಾದ ಥಾಣೆಯಂಥ ಪ್ರದೇಶಗಳೂ ಜಲಾವೃತಗೊಂಡಿವೆ. ಅಂಧೇರಿ, ಸಿಯೋನ್, ಚೆಂಬೂರ್ ಹಾಗೂ ಕುರ್ಲಾ ಮತ್ತು ಥಾಣೆಯ ಮುಂಬ್ರಾದಂಥ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಮುಂಬೈ ನಗರಕ್ಕೆ ನೀರು ಪೂರೈಸುವ ಏಳು ಕೆರೆಗಳ ಪೈಕಿ ಎರಡು ಕೆರೆಗಳಾದ ವಿಹಾರ್ ಕೆರೆ ಹಾಗೂ ಮೋದಕ್ ಸಾಗರ್ ಕೆರೆ ಇಂದು ಉಕ್ಕಿ ಹರಿಯಲು ಪ್ರಾರಂಭಿಸಿವೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯು ತಿಳಿಸಿದೆ. ಈ ಎರಡು ಕೆರೆಗಳ ನೀರಿನ ಸಾಮರ್ಥ್ಯವು ಕ್ರಮವಾಗಿ 2,769 ಕೋಟಿ ಲೀಟರ್ ಹಾಗೂ 12,892 ಕೋಟಿ ಲೀಟರ್ ಆಗಿದೆ.
ಪುಣೆಯ ಏಕ್ತಾನಗರ್, ಸಿಂಹ್ ಗಢ್ ರಸ್ತೆ ಹಾಗೂ ರಾರ್ಜೆ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಕೆಲವು ಸ್ಥಳಗಳಲ್ಲಿ ಸೊಂಟದವರೆಗೂ ನೀರು ನಿಂತಿವೆ. ಭಾರಿ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಮುತಾ ನದಿಯ ಮೇಲೆ ನಿರ್ಮಿಸಲಾಗಿರುವ ಬಾಬಾ ಭಿಡೆ ಸೇತುವೆಯೀಗ ನದಿ ನೀರಿನಲ್ಲಿ ಮುಳುಗಿದೆ.
ಮಳೆಯಿಂದಾಗಿರುವ ಅವಘಡಗಳ ಕುರಿತು ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಲ್ಲಿರುವ ಎಲ್ಲ ಪ್ರವಾಸೋದ್ಯಮ ತಾಣಗಳನ್ನು ಬಂದ್ ಮಾಡುವಂತೆ ಪುಣೆಯ ಜಿಲ್ಲಾಧಿಕಾರಿ ಸುಹಾಸ್ ದಿವಸೆ ಆದೇಶಿಸಿದ್ದಾರೆ. ಮುಳುಗುವ ಅಪಾಯವಿರುವ ಸೇತುವೆಗಳ ಮೇಲಿನ ಸಂಚಾರವನ್ನು ನಿಷೇಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಪುಣೆಯ ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿರುವ ಜಿಲ್ಲಾಡಳಿತವು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರುವಂತೆ ಸಲಹೆ ನೀಡಿದೆ.
ಭಾರಿ ಪ್ರಮಾಣದ ಮಳೆಯಿಂದಾಗಿ ಖಡಕ್ ವಾಸ್ಲಾ ಅಣೆಕಟ್ಟೆಯ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಮುತ್ತಾ ನದಿ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.