ಮುಂಬೈನಲ್ಲಿ ಧಾರಾಕಾರ ಮಳೆ, ರೈಲು ಸಂಚಾರ ಅಸ್ತವ್ಯಸ್ತ
ಸಾಂದರ್ಭಿಕ ಚಿತ್ರ Photo: PTI
ಮುಂಬೈ: ಶನಿವಾರ ಹಾಗೂ ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ವಾಣಿಜ್ಯ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆಗಳಲ್ಲಿ ಸಂಚಾರದಟ್ಟಣೆ ಕಾಣಿಸಿಕೊಂಡಿದ್ದು, ಕಲ್ಯಾಣ್- ಕೇಸರ್ ಸೆಕ್ಷನ್ ನ ಖಡವಿಲಿ ಮತ್ತು ತಿತ್ವಾಲ ನಡುವೆ ಸ್ಥಳೀಯ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ವಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ದಿನವಿಡೀ ಸಾಮಾನ್ಯದಿಂದ ಭಾರೀ ಮಳೆ ಮುಂಬೈ ನಗರದಲ್ಲಿ ಬೀಳುವ ನಿರೀಕ್ಷೆ ಇದ್ದು, ರಾತ್ರಿ ವೇಳೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಮತ್ತು ಭಾರಿ ಗಾಳಿಯಿಂದಾಗಿ ರೈಲು ಹಳಿಯ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ಕಸರ ಮತ್ತು ತಿತ್ವಾಲ ನಿಲ್ದಾಣಗಳ ನಡುವೆ ಭಾನುವಾರ ರೈಲು ಸಂಚಾರ ರದ್ದುಪಡಿಸಲಾಗಿತ್ತು. ಅಟಗಾಂವ್ ಮತ್ತು ಥಾನ್ಸಿಟ್ ನಿಲ್ದಾಣಗಳ ನಡುವೆ ಹಳಿಗೆ ಭಾರಿ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಬಂದು ರಾಶಿ ಬಿದ್ದಿದೆ. ವಶಿಂದ್ ನಿಲ್ದಾಣ ಬಳಿ ರೈಲು ಹಳಿಗಳ ಮೇಲೆ ಮರ ಬಿದ್ದು, ರೈಲು ಸಂಚಾರಕ್ಕೆ ತಡೆ ಉಂಟಾಗಿದೆ. ಸೋಮವಾರ ಸಂಚಾರ ಪುನರಾರಂಭವಾಗುವ ನಿರೀಕ್ಷೆ ಇದೆ.
ಸೋಮವಾರ ಮುಂಜಾನೆ ಕೂಡಾ ದಿನ್ ಧೋಶಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗಲಿದೆ. ಮಧ್ಯ ಮಹಾರಾಷ್ಟ್ರ ಹಾಗೂ ಮರಾಠವಾಡ ಪ್ರದೇಶದಲ್ಲಿ ಜುಲೈ 9 ರಿಂದ 10ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಅಂದಾಜಿಸಿದೆ.