ನೂಹ್ ಹಿಂಸಾಚಾರ : ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಗೆ ಜಾಮೀನು ಮಂಜೂರು
ನೂಹ್ (ಹರ್ಯಾಣ): ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಹಿಂದೆ ಬಂಧನಕ್ಕೊಳಗಾಗಿದ್ದ ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಗೆ ನೂಹ್ ನ್ಯಾಯಾಲಯವು ಬುಧವಾರ ಜಾಮೀನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಮೂಲತಃ ರಾಜ್ ಕುಮಾರ್ ಎಂಬ ಹೆಸರಿನ ಬಿಟ್ಟು ಬಜರಂಗಿಯನ್ನು ಆಗಸ್ಟ್ 15ರಂದು ಬಂಧಿಸಲಾಗಿತ್ತು. ರೂ. 50,000 ಜಾಮೀನು ಮೊತ್ತದ ಬಾಂಡ್ ಮೇಲೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಸಂದೀಪ್ ಕುಮಾರ್ ದುಗ್ಗಲ್ ಅವರು ಬಿಟ್ಟು ಬಜರಂಗಿಗೆ ಜಾಮೀನು ಮಂಜೂರು ಮಾಡಿದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಬೆ ಸಿಂಗ್, ಬಿಟ್ಟು ಬಜರಂಗಿಯನ್ನು ಫರೀದಾಬಾದ್ ನ ನೀಮ್ಕಾ ಕಾರಾಗೃಹದಲ್ಲಿಡಲಾಗಿದ್ದು, ಆತನನ್ನು ಬುಧವಾರ ಸಂಜೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. “ಆತನನ್ನು ನೂಹ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಆದರೆ, ಕಾರಾಗೃಹದಲ್ಲಿರುವ ಸ್ಥಳೀಯ ಹಿಂಸಾಚಾರ ಆರೋಪಿಗಳು ಆತನ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ, ಆತನನ್ನು ಫರೀದಾಬಾದ್ ಕಾರಾಗೃಹಕ್ಕೆ ಕಳಿಸಬೇಕು ಎಂದು ಆತನ ವಕೀಲರು ಮನವಿ ಮಾಡಿದ್ದರು. ಭದ್ರತಾ ದೃಷ್ಟಿಯಿಂದ ಪ್ರಾಧಿಕಾರಗಳು ಆತನನ್ನು ನೀಮ್ಕಾ ಕಾರಾಗೃಹಕ್ಕೆ ರವಾನಿಸಿದ್ದವು” ಎಂದು ಅವರು ತಿಳಿಸಿದ್ದಾರೆ.
ಹಲ್ಲೆ, ಸಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಗಲಭೆಗೆ ಪ್ರಚೋದನೆ ಆರೋಪಗಳೊಂಡಿಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳೊಂದಿಗೆ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಶಸ್ತ್ರಾಸ್ತ ಕಾಯ್ದೆಯನ್ವಯ 15-20 ಮಂದಿ ಅನಾಮಿಕರ ಹೆಸರುಗಳನ್ನೂ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.