ಕೈಕೋಳ ಹಾಕಿ ಆರೋಪಿಗೆ ಬೈಕ್ ಚಲಾಯಿಸಲು ಅವಕಾಶ ಮಾಡಿಕೊಟ್ಟ ಪೊಲೀಸ್! ವೀಡಿಯೊ ವೈರಲ್
PC : X/@ManishY78062388
ಉತ್ತರಪ್ರದೇಶ: ಕೈಗೆ ಹಗ್ಗದಿಂದ ಕೈಕೋಳ ಹಾಕಿದ ವ್ಯಕ್ತಿಯೋರ್ವ ಬೈಕ್ ಚಲಾಯಿಸುತ್ತಿರುವುದು, ಪೊಲೀಸ್ ಪೇದೆಯೊಬ್ಬರು ಅವರ ಹಿಂದೆ ಸಹ ಸವಾರನಾಗಿ ಪ್ರಯಾಣಿಸುತ್ತಿರುವುದು ವೀಡಿಯೊವೊಂದರಲ್ಲಿ ಸೆರೆಯಾಗಿದೆ. ಉತ್ತರಪ್ರದೇಶದ ಮೈನ್ ಪುರಿಯಲ್ಲಿ ನಡೆದ ಘಟನೆ ಇದು ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವೀಡಿಯೊದಲ್ಲಿ ಆರೋಪಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದ ಸವಾರನ ಸೀಟಿನಲ್ಲಿ ಕುಳಿತಿರುವುದನ್ನು ತೋರಿಸುತ್ತದೆ. ಪೊಲೀಸ್ ಅಧಿಕಾರಿ ಹೆಲ್ಮೆಟ್ ಧರಿಸಿ ಆತನ ಹಿಂದೆ ಸಹ ಸವಾರನಾಗಿ ಕುಳಿತಿರುವುದು ಕಂಡು ಬಂದಿದೆ. ಸವಾರನ ಕೈಗೆ ಹಗ್ಗ ಹಾಕಲಾಗಿದ್ದು, ಹಿಂಬದಿಯಲ್ಲಿದ್ದ ಪೊಲೀಸ್ ಅದನ್ನು ಹಿಡಿದುಕೊಂದು ಸಂಚರಿಸುತ್ತಿರುವುದು ಕಂಡು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಾರಿಹೋಕರು ಈ ವೀಡಿಯೊವನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಆರೋಪಿಯ ಗುರುತು ಪತ್ತೆ ಹಚ್ಚಬೇಕಿದೆ, ಆತನ ಆಪಾದಿತ ಅಪರಾಧದ ವಿವರಗಳ ಬಗ್ಗೆ ಇನ್ನಷ್ಠೇ ಮಾಹಿತಿ ಹೊರ ಬರಬೇಕಿದೆ, ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಂದು ಮೈನ್ ಪುರಿ ಪೊಲೀಸರು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.
ಈ ವಿಲಕ್ಷಣ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೈಕೋಳ ಹಾಕಿ ಕ್ರಿಮಿನಲ್ ಗೆ ಬೈಕ್ ಚಲಾಯಿಸಲು ಅವಕಾಶ ಮಾಡಿಕೊಟ್ಟ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ.