ಹೇಮಾ ಸಮಿತಿ ವರದಿ | ಆರೋಪಿ ಸದಸ್ಯರನ್ನು ರಕ್ಷಿಸುವುದಿಲ್ಲ : ಚಲನಚಿತ್ರ ಕಾರ್ಮಿಕರ ಒಕ್ಕೂಟ
PC : PTI
ಕೊಚ್ಚಿ : ನ್ಯಾ. ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಸದಸ್ಯರನ್ನು ತಾನು ರಕ್ಷಿಸುವುದಿಲ್ಲ ಎಂದು ಶನಿವಾರ ಘೋಷಿಸಿರುವ ಕೇರಳ ಚಲನಚಿತ್ರ ಕಾರ್ಮಿಕರ ಒಕ್ಕೂಟವು, ಒಂದು ವೇಳೆ ಅಂಥವರೇನಾದರೂ ಬಂಧನಕ್ಕೊಳಗಾದರೆ, ಅಂಥವರನ್ನು ಒಕ್ಕೂಟದ ಸದಸ್ಯತ್ವದಿಂದ ಅಮಾನತುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಅಂತಹ ದೂರುಗಳ ಕುರಿತೇನಾದರೂ ನಮ್ಮ ಗಮನಕ್ಕೆ ಬಂದರೆ, ಕೇರಳ ಚಲನಚಿತ್ರ ಕಾರ್ಮಿಕರ ಒಕ್ಕೂಟವೇ ಈ ಸಂಬಂಧ ಪೊಲೀಸರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲಿದ್ದೇವೆ ಎಂದು ಕೇರಳ ಚಲನಚಿತ್ರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಉನ್ನಿಕೃಷ್ಣನ್ ಹೇಳಿದ್ದಾರೆ.
ಕೆಲವು ಒಕ್ಕೂಟದ ಸದಸ್ಯರೂ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದೂ ಉನ್ನಿಕೃಷ್ಣನ್ ಒಪ್ಪಿಕೊಂಡಿದ್ದಾರೆ.
“ನಮ್ಮ ಒಕ್ಕೂಟದ ಸದಸ್ಯರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾದ ಕೂಡಲೇ ನಾವು ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಪೊಲೀಸರೇನಾದರೂ ನಂತರ ಯಾವುದಾದರೂ ವರದಿಯನ್ನು ಸಲ್ಲಿಸಿದರೆ, ಯಾವುದಾದರೂ ವ್ಯಕ್ತಿಯ ಕುರಿತು ನ್ಯಾಯಾಲಯವೇನಾದರೂ ಉಲ್ಲೇಖಿಸಿದರೆ ಅಥವಾ ಬಂಧನಕ್ಕೊಳಗಾದರೆ, ಅಂತಹ ವ್ಯಕ್ತಿಯನ್ನು ಒಕ್ಕೂಟದಿಂದ ಅಮಾನತುಗೊಳಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ತಜ್ಞರ ಸಮಿತಿ ವರದಿಯಲ್ಲಿ ಬೆಳಕಿಗೆ ಬಂದ ಆಘಾತಕಾರಿ ಅಂಶಗಳ ಕುರಿತು ಒಕ್ಕೂಟವು ಮೌನವಾಗಿತ್ತು ಎಂಬ ಆರೋಪಗಳನ್ನೂ ಅವರು ನಿರಾಕರಿಸಿದ್ದಾರೆ.
ಚಿತ್ರೋದ್ಯಮದ ಮೇಲೆ ಪರಿಣಾಮ ಬೀರಲಿರುವ ವರದಿಯ ಬಗ್ಗೆ ಅಧಿಕೃತ ಹೇಳಿಕೆ ನೀಡುವುದಕ್ಕೂ ಮುನ್ನ, ಒಕ್ಕೂಟದ ಭಾಗವಾಗಿರುವ ಎಲ್ಲ 21 ಸಂಘಟನೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಿತಿಯ ಬಹುತೇಕ ಸದಸ್ಯರು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.