ಹೇಮಂತ್ ಕರ್ಕರೆ ಮೃತಪಟ್ಟಿದ್ದು ಆರೆಸ್ಸೆಸ್ ನಂಟು ಹೊಂದಿದ್ದ ಪೊಲೀಸ್ ಅಧಿಕಾರಿಯ ಗುಂಡೇಟಿನಿಂದ ; ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಆರೋಪ
ಹೇಮಂತ್ ಕರ್ಕರೆ | PC : NDTV
ಮುಂಬೈ : 26/11ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಕೊಂದ ಗುಂಡು ಅಜ್ಮಲ್ ಕಸಬ್ ಅಥವಾ ಪಾಕಿಸ್ತಾನದ ಇತರ 9 ಮಂದಿ ಭಯೋತ್ಪಾದಕರಲ್ಲಿ ಯಾರೊಬ್ಬರ ಬಂದೂಕಿನಿಂದ ಹಾರಿರಲಿಲ್ಲ. ಬದಲಾಗಿ ಆರೆಸ್ಸೆಸ್ ನೊಂದಿಗೆ ನಂಟು ಹೊಂದಿದ ಪೊಲೀಸ್ ಅಧಿಕಾರಿಯ ಬಂದೂಕಿನಿಂದ ಹಾರಿತ್ತು ಎಂದು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ನ ವಿಜಯ್ ವಡೆಟ್ಟಿವಾರ್ ಅವರು ಶನಿವಾರ ಪ್ರತಿಪಾದಿಸಿದ್ದಾರೆ.
ಪ್ರಕರಣದ ವಿಶೇಷ ಸರಕಾರಿ ವಕೀಲ ಹಾಗೂ ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಮ್ ಈ ಸತ್ಯವನ್ನು ಮರೆ ಮಾಚಿದ ದೇಶದ್ರೋಹಿ ಎಂದು ಅವರು ಹೇಳಿದ್ದಾರೆ.
ವೀಡಿಯೊ ಹೇಳಿಕೆಯಲ್ಲಿ ವಡೆಟ್ಟಿವಾರ್, ತನಿಖೆಯ ಸಂದರ್ಭ ಪ್ರಮುಖ ಮಾಹಿತಿ ಹೊರಬಿದ್ದಿತ್ತು. ಆದರೆ, ಇದನ್ನು ದೇಶದ್ರೋಹಿಯಾಗಿರುವ ಉಜ್ವಲ್ ನಿಕಮ್ ಮರೆ ಮಾಚಿದ್ದಾರೆ. ಬಿಜೆಪಿ ದೇಶದ್ರೋಹಿಯನ್ನು ರಕ್ಷಿಸುತ್ತಿದೆ ಯಾಕೆ ? ಹಾಗೂ ಇಂತಹ ವ್ಯಕ್ತಿಯನ್ನು ಲೋಕಸಭಾ ಚುನಾವಣೆಗೆ ನಾಮನಿರ್ದೇಶಿಸಿರುವುದು ಯಾಕೆ ? ಈ ಮೂಲಕ ಬಿಜೆಪಿ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ವಡೆಟ್ಟಿವಾರ್ ಅವರ ಹೇಳಿಕೆಗೆ ಉಜ್ವಲ್ ನಿಕಮ್ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ವಡೆಟ್ಟಿವಾರ್ ಅವರ ಆರೋಪ ಆಧಾರ ರಹಿತ ಹಾಗೂ ಬೇಜವಾಬ್ದಾರಿಯುತ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಜೀವಂತವಾಗಿ ಬಂಧಿತನಾದ, ಅನಂತರ ಅಪರಾಧಿ ಎಂದು ಸಾಬೀತಾಗಿ ಗಲ್ಲಿಗೇರಿದ ಕಸಬ್ ಪರ ಎಂದು ಅವರು ಹೇಳಿದ್ದಾರೆ.
‘‘ಇದು ಅಜಾಗರೂಕತೆಯ ಹೇಳಿಕೆ. ಇಂತಹ ಆಧಾರ ರಹಿತ ಆರೋಪಗಳಿಂದ ನನಗೆ ನೋವುಂಟಾಗಿದೆ. ನನ್ನ ಬದ್ಧತೆ ಬಗ್ಗೆ ಅನುಮಾನ ಮೂಡಿದೆ. ಇದು ಸ್ಪಷ್ಟವಾಗಿ ಚುನಾವಣಾ ರಾಜಕೀಯದ ಮಟ್ಟವನ್ನು ಪ್ರತಿಬಿಂಬಿಸಿದೆ. ರಾಜಕಾರಣಿಗಳು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇದು ರಾಜಕೀಯ ಲಾಭಕ್ಕಾಗಿಯೇ? ಅವರು ಅನುಮಾನಿಸುತ್ತಿರುವುದು ನನ್ನನ್ನಲ್ಲ. ಬದಲಾಗಿ 26/11ರ ದಾಳಿಯಲ್ಲಿ ಸಾವನ್ನಪ್ಪಿದ 166 ಮಂದಿಯ ಆತ್ಮಗಳಿಗೆ ಹಾಗೂ ಗಾಯಗೊಂಡ ಎಲ್ಲಾ ವ್ಯಕ್ತಿಗಳಿಗೆ’’ ಎಂದು ಅವರು ಹೇಳಿದ್ದಾರೆ.
ಉಜ್ವಲ್ ನಿಕಮ್ ವಿರುದ್ಧದ ಹೇಳಿಕೆ ವೈರಲ್ ಆಗುತ್ತಿದ್ದಂತೆ ವಡೆಟ್ಟಿವಾರ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ‘‘ಅದು ನನ್ನ ಮಾತುಗಳಲ್ಲ. ಎಸ್.ಎಂ. ಮುಶ್ರೀಫ್ ಅವರ ಪುಸ್ತಕದಲ್ಲಿ ಬರೆದಿರುವುದನ್ನು ಹೇಳಿದ್ದೇನೆ’’ ಎಂದಿದ್ದಾರೆ.