ನಾಳೆ(ಮೇ 7) ಸುಪ್ರೀಂ ಕೋರ್ಟ್ ನಲ್ಲಿ ಹೇಮಂತ್ ಸೊರೇನ್ ಜಾಮೀನು ಅರ್ಜಿ ವಿಚಾರಣೆ
ಹೇಮಂತ್ ಸೊರೇನ್ | PC : PTI
ಹೊಸದಿಲ್ಲಿ : ಜಾರಿ ನಿರ್ದೇಶನಾಲಯ(ಈಡಿ)ವು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೇಮಂತ್ ಸೊರೇನ್ರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ನಿಗದಿಪಡಿಸಬೇಕೆಂದು ಕೋರುವ ಅರ್ಜಿಯನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ಮುಂದೆ ಮಂಡಿಸಿದರು.
ಜಾರ್ಖಂಡ್ ನಲ್ಲಿ ಲೋಕಸಭಾ ಚುನಾವಣೆಯ ಮತದಾನ ಮೇ 13ರಂದು ಆರಂಭಗೊಳ್ಳುತ್ತದೆ ಎಂದು ಹೇಳಿದ ಸಿಬಲ್, ಅವರಿಗೆ ತನ್ನ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚದ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
‘‘ಹೇಮಂತ್ ಸೊರೇನ್ ರನ್ನು ಜನವರಿ 31ರಂದು ಬಂಧಿಸಲಾಗಿದೆ. ನಾವು ಫೆಬ್ರವರಿ 4ರಂದು ಹೈಕೋರ್ಟ್ ಗೆ ಹೋದೆವು. ಹೈಕೋರ್ಟ್ ಫೆಬ್ರವರಿ 28ರಂದು ತನ್ನ ತೀರ್ಪನ್ನು ಕಾದಿರಿಸಿದೆ. ಆದರೆ, ಅದು ಇನ್ನೂ ತೀರ್ಪು ನೀಡಿಲ್ಲ. ಹೈಕೋರ್ಟ್ ತುಂಬಾ ಸಮಯದವರೆಗೆ ತೀರ್ಪನ್ನು ಕಾದಿರಿಸಿದೆ’’ ಎಂದು ಅವರು ಹೇಳಿದರು.
‘‘ರಾಜ್ಯದಲ್ಲಿ ಮೊದಲ ಹಂತದ ಮತದಾನ ಮೇ 13ರಂದು ನಡೆಯಲಿದೆ. ಹಾಗಾಗಿ, ನಾವು ಸಂವಿಧಾನದ 32ನೇ ವಿಧಿಯನ್ವಯ ನಾವು ಈ ನ್ಯಾಯಾಲಯಕ್ಕೆ ಬಂದೆವು. ಕಳೆದ ವಾರ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಳಿಕ ತೀರ್ಪು ನೀಡಿದ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಈ ರೀತಿಯಲ್ಲಿ ಹಕ್ಕುಗಳನ್ನು ತುಳಿಯುತ್ತಿರುವುದು ದುರದೃಷ್ಟಕರವಾಗಿದೆ’’ ಎಂದು ಸಿಬಲ್ ಹೇಳಿದರು.
ಈ ಮನವಿಯನ್ನು ಪರಿಗಣಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಸೊರೇನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಈ ಪೀಠದ ಇತರ ಸದಸ್ಯರಾಗಿದ್ದಾರೆ.
ನಡೆದಿದೆ ಎನ್ನಲಾದ ಭೂಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ರನ್ನು ಬಂಧಿಸಲಾಗಿತ್ತು.